ಕೃಷ್ಣಾಷ್ಟಮಿ 2018-19

ಕೃಷ್ಣಾಷ್ಟಮಿ

“ಕೃಷ್ಣಾಯ ವಾಸುದೇವಾಯ ದೇವಕೀನಂದನಾಯ ಚ |
ನಂದಗೋಪಕುಮಾರಾಯ ಗೋವಿಂದಾಯ ನಮೋ ನಮಃ ||
(ಅರ್ಥ—) 

ಆದೌ ದೇವಕಿದೇವಿಗರ್ಭಜನನಂ ಗೋಪೀಗೃಹೇ ವರ್ಧನಂ
ಮಾಯಾಪೂತನಿಜೀವಿತಾಪಹರಣಂ ಗೋವರ್ಧನೋದ್ಧಾರಣಮ್ |
ಕಂಸಚ್ಛೇದನಕೌರವಾದಿಹನನಂ ಕುಂತೀಸುತಾಃಪಾಲನಂ
ಏತದ್ಭಾಗವತಂ ಪುರಾಣಕಥಿತಂ ಶ್ರೀಕೃಷ್ಣಲೀಲಾಮೃತಮ್ ||
(ಅರ್ಥ—)

ಜಗದ್ರಣಾಂಗಣೇ ಯಸ್ಯ ಸ್ಮರಣಂ ಜಯಕಾರಣಮ್ |
ಪಾರ್ಥಸಾರಥಯೇ ತಸ್ಮೈ ಶ್ರೀಕೃಷ್ಣಬ್ರಹ್ಮಣೇ ನಮಃ ||
(ಅರ್ಥ—) 

ಮಾನುಷ್ಯಲೀಲಾರಸಿಕನತಿಮಾನುಷವೈಭವಂ |
ಮಾನುಷಾಸ್ಪೃಷ್ಟಚಿತ್ತೇಜಂ ಕೃಷ್ಣನಿರ್ಕೆಮ್ಮ ಚಿತ್ತದೊಳ್ ||”
(ಅರ್ಥ—)

ಅಜಾತನ ಜನ್ಮದಿನ ಗೋಕುಲಾಷ್ಟಮಿ. ಜ್ಞಾನದ ಕುಲ ಗೋಕುಲ.  ಮಥುರಾಷ್ಟಮಿಯಲ್ಲ. ಕೃಷ್ಣಪಕ್ಷದ ಅಷ್ಟಮಿಯು ಪೂರ್ಣಧರ್ಮವೆಂಬ ಪೌರ್ಣಮಿಯಿಂದ ತೊಡಗಿ ಧರ್ಮಹ್ರಾಸವಾಗುತ್ತಾ, ೫೦% ಕ್ಕಿಂತ ಹೆಚ್ಚು ಅಧರ್ಮ ಬಂದಾಗ, ಆ ಪಕ್ಷದ ೧೫ ದಿನಗಳಲ್ಲಿ ೮ನೆಯ ದಿನ, 
“ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ | ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್ || 
ಪರಿತ್ರಾಣಾಯ ಸೂಧೂನಾಂ ವಿನಾಶಾಯ ಚ ದುಷ್ಕೃತಾಮ್ |
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ ||”
ಎಂಬ ಗೀತೋಪದೇಶದ ವಾಕ್ಯದನುಸಾರ ವಿಷ್ಣುವೇ ಕೃಷ್ಣನಾಗಿ ಧರೆಯೊಳವತರಿಸುತ್ತಾನೆ. 

ಸಮಗ್ರ ಇತಿಹಾಸದಲ್ಲಿ ಕಷ್ಟವನ್ನು ಭಗವಂತನಲ್ಲಿ ಬೇಡಿದವಳು ಕುಂತಿ. ಕೃಷ್ಣನ ವ್ಯವಹಾರ ರಾಜನಂತಿರದೆ ಸೇವಕನಂತೆ ವಿಜ್ಞಾಪನೆ, ವಿನಂತಿ ಅಥವಾ ವಿನಯಪೂರ್ವಕವಾಗಿತ್ತು. ಆತ ಪ್ರತ್ಯಕ್ಷವಾಗಿ ರಾಜನಾಗದಿದ್ದರೂ, ಯಾದವರ ಅಘೋಷಿತ, ಅನಭಿಷಿಕ್ತ ಅರಸನಾದ. ಒಬ್ಬ ಪರಿಪೂರ್ಣ ಸೇವಕ ಮಾತ್ರ ಪರಿಪೂರ್ಣರಾಜನಾಗಬಲ್ಲನೆಂಬುದಕ್ಕೆ ಕೃಷ್ಣನೇ ಅತ್ಯುತ್ತಮ ನಿದರ್ಶನ. 

“ಅಹಮಾತ್ಮಾ ಗುಡಾಕೇಶ ಸರ್ವಭೂತಾಶಯಸ್ಥಿತಃ |”
ಗುಡಾಕೇಶ— ಗುಡಾಕ ಈಶ— ನಿದ್ದೆಯನ್ನು ಗೆದ್ದವನು, ಜಾಗೃತಾತ್ಮನು, ಎಚ್ಚರದಿಂದಿರುವವನು. “ಪಾಂಡವಾನಾಂ ಧನಂಜಯಃ”

“ಯದ್ಯದ್ವಿಭೂತಿಮತ್ಸತ್ತ್ವಂ ಶ್ರೀಮದೂರ್ಜಿತಮೇವ ವಾ |
ತತ್ತದೇವಾವಗಚ್ಛ ತ್ವಂ ಮಮ ತೇಜೋऽಂಶಸಂಭವಮ್ ||
ಅಥವಾ ಬಹುನೈತೇನ ಕಿಂ ಜ್ಞಾತೇನ ತವಾರ್ಜುನ |
ವಿಷ್ಟಭ್ಯಾಹಮಿದಂ ಕೃತ್ಸ್ನಮೇಕಾಂಶೇನ ಸ್ಥಿತೋ ಜಗತ್ ||”

श्रीकृष्ण: (ಶ್ರೀಕೃಷ್ಣ:)- 
(१)कर्षत्यखिललोकं चराचरांश्चाकर्षतीति स्वमात्मानं प्रति कान्तवत्। (२)कर्षत्यरीन् महाप्रभावशक्त्या पतङ्गान् दीपवत् । 
(३)कर्षत्यात्मसात्करोति यावदानन्दत्वेन परिणमयति भक्तानां मन:। 
(४)कर्षति सर्वान् स्वकुक्षौ प्रलयकाले। 
(५)‘कर्षणात् कृष्णो रमणाद् रामो व्यापनाद् विष्णु:’ इति श्रुते: तथात्वम्। 
(६)कर्षति पापानि शरणागतानाम्। 
(७)कृषिर्भूवाचक: शब्दो णश्च निर्वृति(सुस्थिति)कारक:।
     तयोरैक्यात् परं ब्रह्म कृष्ण इत्यभिधीयते॥  इति श्रीधरस्वामी। 
(८)तथा च महाभारते-
कृषिर्भूवाचक: शब्दो णश्च निर्वृति(सुस्थिति)कारक:।
कृष्णस्तद्भावयोगाच्च कृष्णो भवति सात्त्वत:॥
(९)भगवदवतारविशेष:। 
[ (೧)ಸಮಸ್ತ ಲೋಕವನ್ನೂ,ಅದರಲ್ಲಿನ ಎಲ್ಲ ಚರ-ಅಚರಗಳನ್ನೂ ತನ್ನೆಡೆಗೆ ಅಯಸ್ಕಾಂತದ ಚುಂಬಕಶಕ್ತಿಯಂತೆ ಸೆಳೆದುಕೊಳ್ಳುವವ; 
( ೨)ತನ್ನ ಮಹಾ ಪ್ರಭಾವಯುತ ಶಕ್ತಿಯಿಂದ ಶತ್ರುಗಳನ್ನು, ದೀಪವು ಪತಂಗಗಳನ್ನು ಆಕರ್ಷಿಸುವಂತೆ, ತನ್ನೆಡೆಗೆ ಆಕರ್ಷಿಸಿ ನಾಶಮಾಡುವವನು; (೩)ಭಕ್ತರ ಮನಸ್ಸನ್ನು ತನ್ನೆಡೆಗೆ ಆಕರ್ಷಿಸಿ, ತನ್ನಲ್ಲೇ ಲೀನವಾಗಿಸಿ, ಪರಮಾನಂದದ ಫಲವನ್ನೀಯುವವನು;
(೪)ಪ್ರಳಯಕಾಲದಲ್ಲಿ ತನ್ನೊಡಲೊಳಗೆ ಎಲ್ಲವನ್ನೂ/ಸಮಗ್ರ ಸೃಷ್ಟಿಯನ್ನೂ ಆಕರ್ಷಿಸಿ, ಬ್ರಹ್ಮಾಂಡೋದರನಾಗುವವನು; 
(೫)‘ಕರ್ಷಣೆಯಿಂದ ಕೃಷ್ಣ, ರಮಿಸುವಿಕೆ/ಆನಂದವೀಯುವಿಕೆಯಿಂದ ರಾಮ, ವ್ಯಾಪಿಸುವಿಕೆಯಿಂದ ವಿಷ್ಣು’ ಎಂಬುದು ಶ್ರುತಿ/ವೇದದ ನಿರ್ವಚನ; 
(೬)ತನ್ನನ್ನು ಶರಣುಹೊಂದಿದವರ ಪಾಪಗಳನ್ನು ಭಸ್ಮಮಾಡುವವನು; (೭)‘ಕೃಷಿ’ಯು ಭೂವಾಚಕ, ‘ಣ’ಕಾರವು ಸುಸ್ಥಿತಿಕಾರಕ. ಇವೆರಡರ ಸೇರುವಿಕೆಯಿಂದ ಭೂಮಿಯೇ ಮುಂತಾದ ಸಕಲಸೃಷ್ಟಿಯನ್ನು ಸುಸ್ಥಿತಿಯಲ್ಲಿಡುವ ಪರಬ್ರಹ್ಮರೂಪನಾದ ಶ್ರೀ’ಕೃಷ್ಣ’ನೆಂಬ ಅರ್ಥ ಬರುತ್ತದೆ. ಇದು ಶ್ರೀಧರಸ್ವಾಮಿಯ ಅಭಿಮತ.
(೮)ಹಾಗೆಯೇ, ಮಹಾಭಾರತದ ಪ್ರಕಾರ- ‘ಕೃಷಿ’ಯು ಭೂವಾಚಕ, ‘ಣ’ಕಾರವು ಸುಸ್ಥಿತಿಕಾರಕ. ಇವೆರಡೂ ಶಬ್ದಗಳ ಭಾವಾರ್ಥಗಳ ಜೋಡಣೆಯಿಂದ ಸತ್ತ್ವಗುಣಭರಿತನಾದ, ಸಾತ್ತ್ವತ(ಯಾದವ)ಕುಲಸಂಭವನಾದ ‘ಕೃಷ್ಣ’ ಎಂಬ ಶಬ್ದವು ಸಿದ್ಧಿಸುವುದು.
(೯)ಭಗವಂತನ ಒಂದು ಅವತಾರವಿಶೇಷವು. ]


“ಕರ್ಷತಿ ಇತಿ ಕೃಷ್ಣಃ”— ಸರ್ವಾಕರ್ಷಕ.
“ನಿಯಮನಸಾಮರ್ಥ್ಯ-ಸೌಂದರ್ಯ-ಸುಖದುಃಖಕರಣಾದಿಗುಣೈಃ ನಿಖಿಲಜಗತ್ ಸ್ವಂ ಪ್ರತಿ ಆಕರ್ಷತಿ ಇತಿ ಕೃಷ್ಣಃ”— ಕಪ್ಪುರಂಧ್ರ / ಕೃಷ್ಣಕುಹರ, ಕಪ್ಪುಬಣ್ಣಗಳಂತೆ. ಸೂಜಿಗಲ್ಲು ಸೂಜಿಯನ್ನೆಳೆದಂತೆ.

“ಯತಃ ಕರ್ಷಸಿ ದೇವೇಶ ನಿಯಮ್ಯ ಸಕಲಂ ಜಗತ್ |
ಅತೋ ವದಂತಿ ಮುನಯಃ ಕೃಷ್ಣಂ ತ್ವಾಂ ಬ್ರಹ್ಮವಾದಿನಃ ||”
(ಮಹಾಕೌರ್ಮಪುರಾಣ—ಮಾಧ್ವ ಗೀ.ಭಾ. ೫.೧)

“ನಸ್ಯೋತವದ್ ಯಸ್ಯ ವಶೇ ಚ ಲೋಕಃ”
(ಭಾಗ.೬.೩.೧೨)
ಯಮನು ತನ್ನ ದೂತರಿಗೆ ಹೇಳಿದಂತೆ ನಸ್ಯೋತ— ಮೂಗುದಾರದ ಮೂಲಕ ಸೂತ್ರಧಾರ.

“ಯಥಾ ಭ್ರಾಮ್ಯತ್ಯಯೋ ಬ್ರಹ್ಮನ್ ಸ್ವಯಮಾಕರ್ಷಸನ್ನಿಧೌ |
ತಥಾ ಮೇ ಭಿದ್ಯತೇ ಚೇತಶ್ಚಕ್ರಪಾಣೇರ್ಯದೃಚ್ಛಯಾ ||”
ಸರ್ವೋತ್ತಮತ್ವ, ಆನಂದಪೂರ್ಣತ್ವ, ಭಕ್ತವಾತ್ಸಲ್ಯಾದಿ ಗುಣಗಳಿಂದ ಭಕ್ತರ ಸೆಳೆವವ. ಪ್ರಹ್ಲಾದನು “ಕಾಂತದೆಡೆಗೆ ಕಬ್ಬಿಣವು ಸೆಳೆವಂತೆಯೇ ಆ ಚಕ್ರಪಾಣಿಯ ಇಚ್ಛಾನುಸಾರವಾಗಿ ತಾನೂ ಆತನೆಡೆಗೆ ಆಕರ್ಷಿತನಾಗಿರುವೆ” ಎಂದು ತನ್ನ ಗುರುಗಳಿಗೆ ಉತ್ತರಿಸಿದನು.

“ಕೃಷ್ಣವರ್ಣತ್ವಾತ್ ಕೃಷ್ಣಃ | ಕೃಷ್ಣೋ ವರ್ಣೋ ಅಸ್ಯ ಅಸ್ತೀತಿ ವಾ |”— ನೀಲಮೇಘಶ್ಯಾಮ. ಇದು ಆತನ ಸ್ವೇಚ್ಛೆ.

“ಜಗತಾಂ ವರ್ಧಯನ್ ಸತ್ವಂ ಯದಾ ರಕ್ಷತಿ ಕೇಶವಃ |
ಹಯಗ್ರೀವಾದಿರೂಪೇಣ ಶುಕ್ಲವರ್ಣಸ್ತದಾ ವಿಭುಃ |
ವರ್ಧಯಂಸ್ತು ರಜೋ ಯೇನ ಜಗದುತ್ಪಾದಯೇದ್ಧರಿಃ |
ತದ್ರಕ್ತಂ ಜಾಮದಗ್ನ್ಯಾದಿರೂಪಂ ಯೇನ ವಿನಾಶಯೇತ್ |
ವರ್ಧಯಂಸ್ತು ತಮೋ ಲೋಕೇ ತತ್ ಕೃಷ್ಣಂ ಯಾದವಾದಿಕಮ್ |
ಸರ್ವತ್ರ ಸರ್ವಂ ಕುರುತೇ ವಿಶೇಷಸ್ತತ್ರ ಕೀರ್ತಿತಃ |......
ಅಸತಾಂ ತು ತಮೋವೃದ್ಧಿಂ ಕುರ್ವನ್ ಪಾತಯತೇ ಯದಾ |
ಸತಾಂ ವಿವರ್ಧನಾರ್ಥಾಯ ಕೃಷ್ಣರೂಪೀ ತದಾ ಹರಿಃ |”
(ಭಾಗ.ತಾ.ನಿ. ೧೦.೪.೨೦)


 ಸತ್ವವರ್ಧನೆಯಿಂದ ಜಗದ್ರಕ್ಷಣೆಗಾಗಿ ಶುಕ್ಲವರ್ಣದ ಹಯಗ್ರೀವಾದಿರೂಪಗಳನ್ನೂ, ರಜೋವರ್ಧನೆಯಿಂದ ಜಗದುತ್ಪತ್ತಿಗಾಗಿ ಕೆಂಬಣ್ಣದ ಪರಶುರಾಮಾದಿರೂಪಗಳನ್ನೂ, ತಮೋಗುಣವರ್ಧನೆಯಿಂದ ಜಗನ್ನಾಶಕ್ಕಾಗಿ ಕಪ್ಪನೆಯ ಯಾದವಕೃಷ್ಣಾದಿರೂಪವನ್ನೂ ತಾಳುವನು. ಆದ್ದರಿಂದ, ದುಷ್ಟರ ತಮೋವೃದ್ಧಿಗೈದು ನರಕ, ಅಂಧತಮಸ್ಸುಗಳಲ್ಲಿ ಬೀಳುವಂತೆ ಮಾಡುವುದೇ ಈ ಅವತಾರದ ಮುಖ್ಯ ಕರ್ತವ್ಯ ಎಂಬುದರ ನೆನಪಿಗಾಗಿ ಕಪ್ಪು ಮೈಬಣ್ಣ ತಾಳುವನೆಂದು ವಸುದೇವನು ಕೃಷ್ಣಾವತಾರಕಾಲದಲ್ಲಿ ಸ್ತುತಿಸಿರುವನು.

ಹೀಗಾಗಿಯೇ, ಕೃಷ್ಣ ಕೈತವದ ಶಿಕ್ಷಾಗುರು— ಎಂದಿರುವನು ಕುಮಾರವ್ಯಾಸ (ಕೈತವ— ಮೋಸಗಾರಿಕೆ)
ಹಾಗಾಗಿಯೇ “ಕೃಷ್ಣಾರ್ಪಣ” ಎಂದರೆ ಎಲ್ಲಾ ಮುಗಿಯಿತು ಎಂಬರ್ಥ ರೂಢಿಯಲ್ಲಿದೆ. 

ಇದನ್ನೇ ಭಾಗವತದಲ್ಲಿ ಹೀಗೆ ಹೇಳಿದೆ—
“ಸ ತ್ವಂ ತ್ರಿಲೋಕಸ್ಥಿತಯೇ ಸ್ವಮಾಯಯಾ
 ಬಿಭರ್ಷಿ ಶುಕ್ಲಂ ಖಲು ವರ್ಣಮಾತ್ಮನಃ |
ಸರ್ಗಾಯ ರಕ್ತಂ ರಜತೋಪಬೃಂಹಿತಂ
ಕೃಷ್ಣಂ ಚ ವರ್ಣಂ ತಮಸಾ ಜನಾತ್ಯಯೇ ||
(ಭಾಗ.೧೦.೪.೨೦)

ಶಿವ-ರಾಮ-ಕೃಷ್ಣ— ಈ ಮೂವರಲ್ಲಿ ಶಿವನು ಹುಟ್ಟೇ ಇಲ್ಲದವನು. ರಾಮ ಅಯೋಧ್ಯೆಯ ಅರಮನೆಯಲ್ಲಿ ಬೇಸಿಗೆಯಲ್ಲಿ ಚೈತ್ರಮಾಸದ ಶುಕ್ಲಪಕ್ಷದ ನವಮಿಯಂದು ಹಗಲು / ಬೆಳಗ್ಗೆ ಅವತರಿಸಿದ. ಕೃಷ್ಣಾವತಾರವಾದದ್ದು ಮಳೆಗಾಲದ ಶ್ರಾವಣಮಾಸದ ಕೃಷ್ಣಪಕ್ಷದ ಅಷ್ಟಮಿಯ ಮಧ್ಯರಾತ್ರಿ ಕಂಸನ ಸೆರೆಮನೆಯಲ್ಲಿ. ಅಜ್ಞಾನಾಂಧಕಾರವು ಲೋಕದಲ್ಲಿ ತಾಂಡವವಾಡುತ್ತಿದ್ದಾಗ. ಶಿವನು ಸದಾ ಧ್ಯಾನಪರನೆಂಬುದು ಸರ್ವವಿದಿತ. ಆತನೇ ಆದಿಯೋಗಿಯೆಂದೂ ಪ್ರಸಿದ್ಧ. “ಸದಾಶಿವನಿಗೆ ಅದೇ ಧ್ಯಾನ” ಎಂಬ ಮಾತಿದೆ. ಈತ ಒಬ್ಬ ವ್ಯಕ್ತಿ ಹೇಗೆ ಔನ್ನತ್ಯವನ್ನು ಸಾಧಿಸಬಹುದೆಂಬುದಕ್ಕೆ ಸರಿಯುದಾಹರಣೆ. ರಾಮನಾದರೋ ಕೌಟುಂಬಿಕ ಜೀವನಕ್ಕೆ ಆದರ್ಶಪ್ರಾಯ. ಕೃಷ್ಣನೋ ಸಾಮಾಜಿಕ, ಸಾರ್ವಜನಿಕ ಉದ್ಧಾರದ ಹರಿಕಾರ. ತನಗಿಂತಲೂ, ತನ್ನ ಕುಟುಂಬ-ಸಂಬಂಧಿಕರಿಗಿಂತಲೂ ಸಮಾಜದ ಸಕಲರ ಉದ್ಧಾರಕ್ಕೆ ಹೆಚ್ಚು ಮಹತ್ವ ಕೊಟ್ಟ ಮಹಾನುಭಾವ. ಅದಕ್ಕೇ “ಕೃಷ್ಣಸ್ತು ಭಗವಾನ್ ಸ್ವಯಮ್”. “ ಸದ್ಯೋ ಜಜ್ಞಾನೋ ನಿರಿಣಾತಿ ಶತ್ರೂನ್” ಎಂಬ ಋಗ್ವೇದದಲ್ಲಿ ಬರುವ ವಿಷ್ಣುಸಹಸ್ರನಾಮದ ಮೂಲವಾದ ಬೃಹತೀಚ್ಛಂದಸ್ಸಿನಲ್ಲಿರುವ ೧,೦೦೦ ಮಂತ್ರಗಳ “ಬೃಹತೀಸಹಸ್ರಮ್” ನಲ್ಲಿ ಬರುವ ವಿಷ್ಣುನಾಮದ ಮೂಲವಾದ ಈ ಮಂತ್ರದಂತೆ, ಇದೀಗ ಹುಟ್ಟಿದ ಬಾಲಕೃಷ್ಣನು ಪೂತನಾ, ಶಕಟ, ಧೇನುಕ, ಕಾಳಿಯ ಮುಂತಾದ ಶತ್ರುಗಳನ್ನು ಲೀಲಾಜಾಲವಾಗಿ ಕೊಂದು ತನ್ನ ಅತಿಮಾನುಷಲೀಲೆಯನ್ನು ತೋರಿದ್ದರಿಂದಲೇ ಸಾಕ್ಷಾತ್ ಭಗವಂತನೆನಿಸಿದ. 

ಇನ್ನು ಮಹಾವಿಷ್ಣುವಿನ ದಶಾವತಾರಗಳ ಬಗ್ಗೆ ವಿಮರ್ಶಿಸೋಣ. (ಮೊದಲು ಅವುಗಳ ಸಂಕ್ಷಿಪ್ತ ಕಥೆ, ಬಳಿಕ ತತ್ತ್ವಗಳ ಅವಲೋಕನ ಮಾಡೋಣ.) 

ದಶಾವತಾರಸಂಕ್ಷೇಪ— (ಆಧಾರ— ಪುರಾಣನಾಮಚೂಡಾಮಣಿ)

೧) ಮತ್ಸ್ಯ— ಈಗಿನ / ೭ನೆಯದಾದ ವೈವಸ್ವತ ಮನ್ವಂತರದ ಆದಿಯಲ್ಲಿ (ಮತ್ಸ್ಯಪು.೧, ಭಾ ೮. ೨೪).
೨) ಕೂರ್ಮ— ಹಿಂದಿನ / ೬ನೆಯದಾದ ಚಾಕ್ಷುಷ ಮನ್ವಂತರದಲ್ಲಿ (ಭಾಗವತ ೧. ೩).
೩) ವರಾಹ— ಈಗಿನ ವೈವಸ್ವತ ಮನ್ವಂತರದಲ್ಲಿ / ಈಗಿನ ಬ್ರಹ್ಮನ ಶ್ವೇತವರಾಹಕಲ್ಪವೆಂಬ ದಿನದ ಮಧ್ಯಾಹ್ನದಲ್ಲಿ (ಭಾಗವತ ೩. ೧೨).
೪) ನೃಸಿಂಹ— ಈಗಿನ ವೈವಸ್ವತ ಮನ್ವಂತರದ ೪ನೆಯ ಕೃತಯುಗದಲ್ಲಿ (ಮತ್ಸ್ಯಪು. ೪೭).
೫) ವಾಮನ— ಈಗಿನ ವೈವಸ್ವತ ಮನ್ವಂತರದ ೭ನೆಯ ತ್ರೇತಾಯುಗದಲ್ಲಿ.
೬) ಪರಶುರಾಮ— ಈ ವೈವಸ್ವತ ಮನ್ವಂತರದ ೧೯ನೆಯ ತ್ರೇತಾಯುಗದಲ್ಲಿ.
೭) ರಾಮ— ಈ ಮನ್ವಂತರದ ೨೪ನೆಯ ತ್ರೇತಾಯುಗದಲ್ಲಿ.
೮) ಕೃಷ್ಣ— ಈ ಮನ್ವಂತರದ ೨೮ನೆಯ ದ್ವಾಪರದಲ್ಲಿ.
೯) ಬುದ್ಧ— ಈಗಿನ / ೨೮ನೆಯ ಕಲಿಯುಗಾರಂಭದಲ್ಲಿ.
೧೦) ಕಲ್ಕಿ— ಇದೇ ಕಲಿಯುಗಾಂತ್ಯದಲ್ಲಿ (ಮತ್ಸ್ಯಪುರಾಣ ಅ.೪೭)


ಮತ್ಸ್ಯ ಜಲವಾಸಿ, ಸದಾ ಕಣ್ತೆರೆದಿದ್ದು ಜಾಗೃತಪ್ರಜ್ಞೆಯ ಪ್ರತೀಕ, ಆದರೆ ಸದಾ ಚಂಚಲ. ಇದು ನಿತ್ಯಸಾಕ್ಷಿ ಹಾಗೂ ನಿರಂತರ ಜ್ಞಾನಗಳ ಸೂಚಕ. “ಯೋ ಜಾಗಾರ್ಥಂ ರುಚಕ್ ಕಾಮ್ಯಂತೇ”— (ಋಗ್ವೇದ) ಯಾರು ಎಚ್ಚೆತ್ತುಕೊಂಡಿದ್ದಾರೋ, ಅವರ ಬಳಿ ವೇದಗಳು ತಾನಾಗಿ ಬರುತ್ತವೆ. ವೇದ ಎಂದರೆ ಜ್ಞಾನ. ತಮೋಗುಣದ ನಿದ್ದೆಯಲ್ಲಿದ್ದರೆ ಇಲ್ಲ. ವೇದೋದ್ಧಾರ ಮತ್ಸ್ಯಾವತಾರದ ಹಾಗೂ ಹಯಗ್ರೀವಾವತಾರದ ಗುರಿ.

ಕೂರ್ಮ ಉಭಯವಾಸಿ, ಆದರೆ, “ಕೂರ್ಮೋಂಗಾನೀವ ಸರ್ವಶಃ” ಎಂಬ ಗೀತಾವಾಕ್ಯದಂತೆ ಇಂದ್ರಿಯಗಳನ್ನು ಬಿಗಿಹಿಡಿಯುವ ದ್ಯೋತಕವಾಗಿ  ತನ್ನ ಸರ್ವಾವಯವಗಳನ್ನು ಚಿಪ್ಪಿನೊಳಗೆ ಎಳೆದುಕೊಳ್ಳಬಲ್ಲದು ಹಾಗೂ ಸ್ಥಿರಬುದ್ಧಿಯ ಪ್ರತೀಕವಾಗಿ ಕಠಿಣವಾದ ಜಗ್ಗದ ಕವಚವನ್ನು ಹೊಂದಿದೆ. 

ವರಾಹಾವತಾರ ಪೂರ್ಣವಾಗಿ ಭೂಚರ, ಅದರಲ್ಲೂ ಮುಖ್ಯವಾಗಿ ವನಸೂಕರ / ಕಾಡುಪ್ರಾಣಿ; “ನಿಂದಕರಿರಬೇಕು ಹಂದಿ ಕೇರಿಗೆ ಕಾಗೆ ಊರಿಗೆ ಇದ್ದ ಹಾಗೆ” ಎಂಬ ದಾಸವಾಣಿಯಂತೆ ನಿಂದಕರು ನಮ್ಮನ್ನು ನಿಂದಿಸುವ ಮೂಲಕ ನಮ್ಮ ಪಾಪಗಳನ್ನು ಸ್ವೀಕರಿಸಿ ನಮ್ಮನ್ನು ಪರಿಶುದ್ಧಗೊಳಿಸಿದಂತೆಯೇ ಇದು ಹೊಲಸನ್ನು ಸ್ವಚ್ಛಗೊಳಿಸುವ ಪ್ರತೀಕ. 

ಇನ್ನು ನರಸಿಂಹನಾದರೋ ವಿಕಾಸದ ಹಾದಿಯಲ್ಲಿ ಮುನ್ನಡೆದು ಕಾಡುಪ್ರಾಣಿಗಳಲ್ಲಿ ಶ್ರೇಷ್ಠವಾದ ಮೃಗರಾಜನ ಮುಖ ಹಾಗೂ ನರದೇಹಧರಿಸಿದ್ದು, ಕಂಬದಿಂದ ಸಂಭವಿಸಿ, ದೇವನು ಎಲ್ಲದರಲ್ಲೂ ಇರುವನೆಂಬುದರ ಸೂಚಕ; ಆರ್ತನಾಗಿ ಗೋಗರೆವ ತನ್ನ ಭಕ್ತೋದ್ಧಾರಕ್ಕೆ ಸದಾ ಸಿದ್ಧ ಹಾಗೂ ದುಷ್ಟದಮನಕ್ಕೆ ಯಾವುದೇ ವೇಳೆಯಲ್ಲೂ ಬದ್ಧ ಎಂದು ತೋರುವುದು. 

ವಾಮನರೂಪ ಪೂರ್ಣವಿಕಸಿತ ನರದೇಹ. ಬಲಿಯ ಅಹಂಕಾರವನ್ನು ಮೆಟ್ಟಿದವ. ತನ್ನ ಭಕ್ತನಿಗೂ ಅಹಂಕಾರ ಬಂದರೆ ತಾನು ಅದನ್ನೂ ಮೀರಿ ತ್ರಿವಿಕ್ರಮನಾಗಿಯೂ ಸಹ ಅದನ್ನು ಮೆಟ್ಟಬಲ್ಲನೆಂಬುದರ ದ್ಯೋತಕ. 

ಪರಶುರಾಮನು ಭೃಗುವಂಶದಲ್ಲಿ ಜಮದಗ್ನಿ-ರೇಣುಕೆಯರ ಮಗನಾಗಿ ಆವೇಶಾವತಾರಿಯಾಗಿ ಅವತರಿಸಿ, ಕ್ಷತ್ರಿಯರಾಜನಾದ ಸುದರ್ಶನನ ಅಂಶವಾದ ಕಾರ್ತವೀರ್ಯನು ತನ್ನ ತಂದೆಯ ತಲೆಗಡಿದ ಕಾರಣಕ್ಕಾಗಿ ಬ್ರಾಹ್ಮಣಜಾತನಾದರೂ ಕ್ಷಾತ್ರತೇಜದಿಂದ ದುಷ್ಟ ಆಳರಸರನ್ನು ಹಲವಾರು ಬಾರಿ ಭೂಪ್ರದಕ್ಷಿಣೆ ಮಾಡಿ ಕೊಂದವ; ದೇವನ ಮಹಿಮೆ ಅಪಾರ. ಹೇಗೆ, ಯಾವಾಗ, ಯಾವರೂಪದಲ್ಲಿ ಬರುವನೆಂಬುದನ್ನರಿಯಲಸಾಧ್ಯವೆಂಬುದರ ದ್ಯೋತಕ.

ರಾಮಾವತಾರವು ಇದನ್ನು ಸರಿಮಾಡಲು ಕ್ಷಾತ್ರವಂಶದಲ್ಲೇ ಆಯಿತು. ಪರಶುರಾಮನಿಗೆ ಬಂದ ಗರ್ವವನ್ನು ಅಪಹರಿಸಿದ ರಾಮ. ಶೇಷಾವತಾರಿಯಾದ ತಮ್ಮ ಲಕ್ಷ್ಮಣನಿಂದ ಹಲವು ಬಾರಿ ಬುದ್ಧಿಮಾತು ಕೇಳಿದ್ದಿದೆ. ರಾಮ ಆತ್ಮದ ಪ್ರತೀಕವಾದರೆ, ಲಕ್ಷ್ಮಣ ಪ್ರಜ್ಞೆ / ಬುದ್ಧಿ, ಸೀತೆ ಮನಸ್ಸು.

ಕೃಷ್ಣಾವತಾರ— ದಲ್ಲಿ ಶೇಷಾಂಶನಾದ ಬಲರಾಮನ ತಮ್ಮನಾಗಿ, ಆತನಿಗೆ ಬುದ್ಧಿ ಹೇಳಿ ಸಾಲತೀರಿಸಿದ. ರಾಮ ವಿರಾಗಿಯಾದರೆ ಕೃಷ್ಣ ಧರ್ಮಬದ್ಧವಾಗಿ ಬಹುಭೋಗಿ. ರಾಮ ಹೂಮಾಲೆ ಧರಿಸಿದ್ದೇ ಕಡಿಮೆ. ವನಮಾಲಾಪ್ರಿಯನಾದ ಕೃಷ್ಣ ಧರಿಸದೇ ಇದ್ದದ್ದೇ ಇಲ್ಲ. (ಗುಲಾಬಿ— ರೋಸ್— ಜೀವಬಂಧು) ರಾಮನಾಗಿ ಸೂರ್ಯಾಂಶನಾದ ಸುಗ್ರೀವನಿಗೆ ಮಿತ್ರನಾದರೆ, ಕೃಷ್ಣನಾಗಿ ಸೂರ್ಯಾಂಶದ ಕರ್ಣನ ನಾಶಕ್ಕೆ ಕಾರಣನಾದ. ರಾಮನಾಗಿ ಇಂದ್ರಾಂಶದ ವಾಲಿಯನ್ನು ದೌಷ್ಟ್ಯಕ್ಕಾಗಿ ಕೊಂದರೆ, ಕೃಷ್ಣನಾಗಿ ಇಂದ್ರಾಂಶದ ಅರ್ಜುನನ ಧರ್ಮಕ್ಕೆ ಸಖನಾಗಿ, ಸಾರಥಿಯಾಗಿ, ಭಾವನಾಗಿ ಬಂದು ಸರಿದೂಗಿಸಿದ. ರಾಮನು ವಾಲಿಯನ್ನು ಮರೆಯಿಂದ ಬಾಣಹೂಡಿ ಕೊಂದುದನ್ನು, ಕೃಷ್ಣನಾಗಿ ತಾನೇ ಬೇಡನೊಬ್ಬನಿಂದ ಅನುಭವಿಸಿದಂತೆ ಲೀಲೆತೋರಿದ. ನಿಯಮಗಳಿಗೆ ಸದಾ ಬದ್ಧನಾಗಿ ನೇರದೇಹದ ವ್ಯಕ್ತಿತ್ವ ರಾಮನದಾದರೆ, ನಿಯಮಾತೀತನಾಗಿ ತ್ರಿಭಂಗಿದೇಹದವನಾದ ಕೃಷ್ಣ. 

★ ಕೃಷ್ಣನಿಗೆ ತನ್ನ ನಿಯಮಗಳನ್ನು ತಾನು ಮುರಿದರೂ ಸರಿ, ನಾನು ಅಧಃಪತನಗೊಂಡರೂ ಸರಿ, ಭಕ್ತರ, ಸಜ್ಜನರ, ಲೋಕದ ಕಲ್ಯಾಣವಾಗಬೇಕೆಂಬ ದೃಷ್ಟಿಯಿಂದಾಗಿ ಆತ ತನ್ನ ಪ್ರತಿಜ್ಞೆಯನ್ನೇ ಮುರಿದು ಭೀಷ್ಮನೆದುರು ಚಕ್ರಪಾಣಿಯಾದ. ಇದು ಆತನ ಸಾರ್ವಜನಿಕೋದ್ಧಾರದ, ನಿಸ್ವಾರ್ಥತೆಯ ಹಾಗೂ ಲೋಕಕಲ್ಯಾಣಸಾಧನೆಗಿರುವ ಉತ್ಕಟತೆಯ ಪ್ರತೀಕ. 

★ ಕೃಷ್ಣನೆಷ್ಟು ಮುಗ್ಧನೆಂದರೆ ತನ್ನ ಒಬ್ಬಳು ಪತ್ನಿಯಲ್ಲಿ ಮಾತಾಡಿದ್ದನ್ನು ಇನ್ನೊಬ್ಬಳೊಂದಿಗೆ ಹೇಳಿ ಪದೇ ಪದೇ ಸಂಕಟಕ್ಕೊಳಗಾಗುತ್ತಿದ್ದ. ಅದನ್ನು ಕಂಡು ಆತನ ಪರಮಭಕ್ತರಾದ ನಾರದರು “ಒಂದು ಹೆಂಡತಿಯೊಡನೆ ಮಾತಾಡಿದ್ದನ್ನು ಇನ್ನೊಂದು ಹೆಂಡತಿಗೆ ಹೇಳಬೇಡ” ಎಂದು ಮುಂತಾಗಿ ಉಪದೇಶಿಸುತ್ತಿದ್ದರು.

★ ರಾಧಾ-ಕೃಷ್ಣರ ಜಗಳ, ಬೆಂಕಿಯ ವೃತ್ತವನ್ನು ದಾಟಿ ಗೋಪಿಯರು ಭಕ್ತಿಪರವಶತೆಯಿಂದ ಮೈಮೇಲಿನ ಅರಿವೇ ಇಲ್ಲದೆ ನರ್ತಿಸುತ್ತ ಕೃಷ್ಣನೆಡೆಗೆ ಬರುವುದು. ರಾಧಾಗರ್ವಭಂಗ. ರಾಸಲೀಲೆಯೆಂದರೆ ಪ್ರತಿಯೊಬ್ಬರಿಗೂ “ಕೃಷ್ಣನು ನಮ್ಮವನು ಮಾತ್ರ, ನಾನಿರುವುದು ಕೃಷ್ಣನಿಗಾಗಿ ಮಾತ್ರ, ಕೃಷ್ಣನಿರುವುದು ನನಗಾಗಿ ಮಾತ್ರ” ಎಂಬ ಸ್ಥಿತಿಯು ಉಂಟಾದುದು. ಪ್ರತಿಯೊಬ್ಬರಿಗೂ ತಮ್ಮದೇ ಕೃಷ್ಣ / ಆತ್ಮ ಸಿಕ್ಕಿದ ಮತ್ತು ಶರತ್ಪೂರ್ಣಿಮೆಯ ಬೆಳದಿಂಗಳಲ್ಲಿ ಎಲ್ಲರೂ ನರ್ತಿಸಿದರು.

★ ಫಲದ ಕುರಿತು ಯೋಚಿಸದೇ ಯಾವುದೇ ಕೆಲಸವನ್ನು ಪೂರ್ಣ ಜಾಗೃತನಾಗಿ ಮಾಡುವುದೇ ಕಾರ್ಯಸಾಧನೆಯ ರಹಸ್ಯ. ಇದೇ ಸ್ಥಿತಪ್ರಜ್ಞತೆ. ಫಲಮೋಹ ಹೆಚ್ಚಿದ್ದರೆ ಕಾರ್ಯವು ದುರ್ಬಲವಾಗುವುದು. ಹಾಗಾಗಿ ಎಲ್ಲ ಆತಂಕ, ಭೀತಿಗಳನ್ನು ತೊರೆದು ಭಗವದರ್ಪಣಬುದ್ಧಿಯಿಂದ ಆತನ ಕೈಯ ಸಾಧನವೆಂದು ತಿಳಿದು ಸುಮ್ಮನೆ ಮಾಡಿ. (ಕರ್ಮಣ್ಯೇ ವಾ ಅಧಿಕಾರಸ್ತೇ ಮಾ ಫಲೇಷು ಕದಾಚನ | ಮಾ ಕರ್ಮಫಲಹೇತುರ್ಭೂಃ ಮಾ ತೇ ಸಂಗೋऽಸ್ತ್ವಕರ್ಮಣಿ ||— ಗೀತಾ)

★ “ಯೋ ಮಾಂ ಪಶ್ಯತಿ ಸರ್ವತ್ರ ಸರ್ವಂ ಚ ಮಯಿ ಪಶ್ಯತಿ | ತಸ್ಯಾಹಂ ನ ಪ್ರಣಶ್ಯಾಮಿ ಸ ಚ ಮೇ ನ ಪ್ರಣಶ್ಯತಿ ||”— ಗೀತೆ. ಮಗುವಿನ ಮುಗ್ಧ ಪೂರ್ಣಾನಂದವೇ ಕೃಷ್ಣತತ್ತ್ವ. 
ಗೋಪಾಲ— ಜ್ಞಾನಸಂರಕ್ಷಕ, ಗೋವುಗಳ ರಕ್ಷಕ.
ಗೋವಿಂದ— ಜ್ಞಾನದಾತೃ, ಬೆಳಕನ್ನೀಯುವವ, ಬಾಳಪಯಣದಲ್ಲಿ ರಕ್ಷಿಸುವವ, ಎತ್ತಿಕೊಂಡೊಯ್ಯುವವ, ಗೋವುಗಳ ಪಾಲಕ, ಸತ್ಸಂಕಲ್ಪಗಳ ಪ್ರೇರಕ, ಆತ್ಮಧ್ಯಾನಪ್ರೇರಕ, ಅಂತರಂಗ ಸೌಂದರ್ಯದೊಡನೆ ಸಂಪರ್ಕಿಸುವವ, ಆನಂದಮಯ ಚೇತನ. 

ಕೃಷ್ಣನು ಉತ್ಸವಾದಿಗಳಿಂದ ಕೂಡಿ ವರ್ಣರಂಜಿತವ್ಯಕ್ತಿಯಾಗಿ ೧೨೫ ವರ್ಷ ಬಾಳಿದ. ಇದರ ಅತಿರೇಕದಿಂದ ಯಾದವರು ನಾಶವಾಗಲು ಕಾರಣವಾದರೆ, ಬುದ್ಧನಾಗಿ ಉತ್ಸವರಹಿತ ಏಕಾಂತಬದುಕು, ಶಾಂತಿ, ಸಾಧನೆ, ವೈರಾಗ್ಯಗಳಿಗೆ ಮಹತ್ವ ನೀಡಿ, ಬಹಿರ್ಮುಖವಾದ ಇಂದ್ರಿಯಗಳನ್ನು ಅಂತರ್ಮುಖಗೊಳಿಸಲು ಪ್ರೇರಿಸಿದ.

ಕಲಿಯುಗದ ಕೊನೆಗೆ ತಮೋಗುಣವು ವಿಜೃಂಭಿಸುವ ಕಾಲಕ್ಕೆ, ಕಲ್ಕಿಯಾಗಿ ಸಕಲ ದುಷ್ಟರನ್ನೂ ಸಂಹರಿಸಿ, ಧರ್ಮಸ್ಥಾಪನೆ ಮಾಡಿ ಕೃತ / ಸತ್ಯಯುಗವನ್ನು ತಂದುಕೊಡುವ.


ಶ್ರೀಕೃಷ್ಣನು ಆನಂದದ ಪರಮಾವಧಿಯಾಗಿದ್ದ. ಪ್ರತಿಯೊಂದು ಜೀವಿಯ ಹುಡುಕಾಟ, ಕೆಲಸ-ಕರ್ಮ, ಯೋಚನೆ, ಮಾತುಗಳೆಲ್ಲವೂ ಈ ಆನಂದದ ಪ್ರಾಪ್ತಿಗಾಗಿಯೇ. ಯಾರೇ, ಎಲ್ಲಿಯೇ, ಯಾವುದನ್ನಾದರೂ ಹುಡುಕುತ್ತಿದ್ದಾರೆ, ಮಾಡುತ್ತಿದ್ದಾರೆ, ಯೋಚಿಸುತ್ತಿದ್ದಾರೆ, ಮಾತಾಡುತ್ತಿದ್ದಾರೆಂದರೆ ಅದು ಅಂತಿಮವಾಗಿ ತಮ್ಮ ಆನಂದಕ್ಕಾಗಿಯೇ ಹೊರತು ಬೇರೇನಕ್ಕೂ ಅಲ್ಲ. ಅದು ಆಧ್ಯಾತ್ಮಿಕವಾಗಿಯೇ ಇರಲಿ, ಪ್ರಾಪಂಚಿಕವಾಗಿಯೇ ಇರಲಿ, ಚಲನಚಿತ್ರಗಳಲ್ಲೇ ಇರಲಿ, ಮದ್ಯದಂಗಡಿಗಳಲ್ಲೇ ಇರಲಿ, ಚರ್ಚುಗಳಲ್ಲೇ ಆಗಿರಲಿ, ದೇವಸ್ಥಾನಗಳಲ್ಲಾಗಲಿ, ಹಣವಾಗಲಿ, ಕೀರ್ತಿಯಾಗಲಿ ಅಥವಾ ಅಧಿಕಾರವೇ ಆಗಿರಲಿ— ಇವೆಲ್ಲವೂ ಮೂಲತಃ ಕೇವಲ ಆನಂದಕ್ಕಾಗಿಯೇ. 

ಆದರೆ, ಇವುಗಳಲ್ಲಿ ಹಲವು ಅಪರಿಪೂರ್ಣವಾದ, ತಾತ್ಕಾಲಿಕವಾದ, ಅಶಾಶ್ವತವಾದ ಆನಂದಗಳೆಂಬುದು ನಮ್ಮ ಅರಿವಿಗೆ ಬರುತ್ತದೆ. ತಾತ್ಕಾಲಿಕ ಉಪಶಮನಕಾರಿಯಾದ ತಲೆನೋವಿನ ಮಾತ್ರೆಯಂತೆ. ತಲೆನೋವಿನ ಮೂಲಕಾರಣವೇನೆಂದು ಪತ್ತೆಹಚ್ಚಿ ಚಿಕಿತ್ಸೆ ಮಾಡದ ಹೊರತು ಅದಕ್ಕೆ ಹೇಗೆ ಶಾಶ್ವತ ಪರಿಹಾರವಿಲ್ಲವೋ ಹಾಗೆಯೇ ಶಾಶ್ವತವಾದ, ಪರಿಪೂರ್ಣವಾದ ಆನಂದವು ಯಾವುದೆಂಬುದನ್ನರಿಯದ ಹೊರತು ನಮಗೆ ಅಂತ್ಯವಿಲ್ಲದ ಅನಂತಾನಂದವು ದೊರಕಲಾರದು. 

ಭಗವಂತನೇ ಪೂರ್ಣಾನಂದಸ್ವರೂಪಿಯು. ಆತನೇ ಈ ಇರುವಿಕೆಯೆಲ್ಲವೂ (ಸತ್), ಜ್ಞಾನ-ಶಕ್ತಿ-ಚೈತನ್ಯವೆಲ್ಲವೂ (ಚಿತ್) ಹಾಗೂ ಪರಿಪೂರ್ಣವಾದ ಆನಂದವೂ ಆಗಿ, ಸಚ್ಚಿದಾನಂದಸ್ವರೂಪನಾಗಿರುವನು. ಲವಲೇಶವೂ ನೋವಿನ ಅನುಭವವಿರದ, ಕಷ್ಟದ ಅನುಭವವಿರದ, ರೋಗಗಳ ಅನುಭವವಿರದ ವಿಶಿಷ್ಟವಾದ ಸಂತೋಷವೇ ಆನಂದ ಎಂಬುದು. 

ಮೌನವು ಸ್ವಲ್ಪ ಗಂಭೀರ, ಆದರೆ ಆನಂದವು ಕೇವಲ ಹುಡುಗಾಟ! ಆನಂದವಿರದಿದ್ದರೆ ತುಂಟಾಟವಿರಲು ಸಾಧ್ಯವಿಲ್ಲ ಮತ್ತು ಕೃಷ್ಣನು ಪೂರ್ಣ ತುಂಟಾಟವೇ!! ಆತನ ಅವತಾರದ ಆರಂಭವೇ ಸೆರೆಮನೆಯಲ್ಲಾದರೆ, ಬದುಕಿನುದ್ದಕ್ಕೂ ಹೋರಾಟ-ಸಾವು-ನೋವುಗಳ ಸರಮಾಲೆ. ಕೊನೆಗೆ ಮರಣ / ಅವತಾರ ಸಮಾಪ್ತಿಯೂ ಬೇಡನೊಬ್ಬನ ಬಾಣಾಘಾತದಿಂದ. ಆದರೂ, ಯಾರಿಗೂ ಆತನ ಆನಂದವನ್ನು ಕಸಿದುಕೊಳ್ಳಲಾಗಲಿಲ್ಲ; ಆತನೂ ಯಾವುದೇ ಸಂದರ್ಭದಲ್ಲೂ ತನ್ನ ಆನಂದವನ್ನು ಕಳೆದುಕೊಳ್ಳಲಿಲ್ಲ. ತಾನು ಗೀತೆಯಲ್ಲಿ ಬೋಧಿಸಿದಂತೆಯೇ ("ಯೋಗಸ್ಥಃ ಕುರು ಕರ್ಮಾಣಿ", "ಸ್ಥಿತಪ್ರಜ್ಞಸ್ತದೋಚ್ಯತೇ"…) ಆತನು ಸದಾ ಸಮಚಿತ್ತ-ಸ್ಥಿರಬುದ್ಧಿಯುಳ್ಳವನಾಗಿದ್ದ. ತನ್ನ ಸಮತೋಲನವನ್ನು ಎಂದೂ ಕಳೆದುಕೊಳ್ಳಲಿಲ್ಲ!! 

ಕೃಷ್ಣನ ತುಂಟಾಟಗಳು ಆತನ ನಗುಮೊಗವನ್ನೊಮ್ಮೆ ನೋಡಿದ ತಕ್ಷಣ ಜನರಿಗೆ ಮರೆತುಹೋಗಿ ಮಂತ್ರಮುಗ್ಧರಾಗಿ, ಎಲ್ಲರೂ ಆತನನ್ನು ಬಹಳ ಇಷ್ಟಪಡುತ್ತಿದ್ದರು. ಅಂತಹ ಸರ್ವಾಕರ್ಷಕ ಶಕ್ತಿಯಿರುವವನೆಂಬುದೇ ಕೃಷ್ಣಶಬ್ದದ ಅರ್ಥ. ಹೀಗೆ ಆತನ ಕೀಟಲೆಗಳೆಲ್ಲಾ ಕೇವಲ ಸಿಹಿಕೀಟಲೆಗಳಾಗಿ ಮಾರ್ಪಡುತ್ತಿದ್ದವು. ಶುದ್ಧ ಆನಂದ ಮತ್ತು ಸಂತೋಷದ ಅಸ್ತಿತ್ವದಲ್ಲಿ ಎಲ್ಲಾ ದೂರುಗಳೂ ಮಾಯವಾಗಿಬಿಡುತ್ತವೆ!! 

ಕೃಷ್ಣನು ಬಹಳ ತುಂಟನಾಗಿ ಆಕರ್ಷಕವಾಗಿದ್ದ. ಯುವಕನಾಗಿ ಬಹಳ ಸಾಹಸಿಯಾಗಿದ್ದ. ಕೃಷ್ಣನಿಗೆ ಎಲ್ಲವೂ ಸಾಧ್ಯ! ಕೃಷ್ಣನು ಇಂತಿಷ್ಟೇ ಎಂದು ನಿರ್ದಿಷ್ಟವಾಗಿ ತೋರಿಸಲಸಾಧ್ಯ. ಒಂದು ಕಡೆ ಆತ ಸಾರಥಿ, ಮತ್ತೊಂದು ಕಡೆ ನರ್ತಿಸುತ್ತಿದ್ದ, ಇನ್ನೊಂದು ಕಡೆ ಬೋಧಿಸುತ್ತಿದ್ದ, ಮಗದೊಂದು ಸ್ಥಳದಲ್ಲಿ ಹರಟೆ ಹೊಡೆಯುತ್ತಿದ್ದ! ಆತನು ಆದರ್ಶ ಸ್ನೇಹಿತ, ಅದ್ಭುತ ಜಗದ್ಗುರು, ಶ್ರೇಷ್ಠ ವಿದ್ಯಾರ್ಥಿ, ಹಾಗೆಯೇ ಅತೀ ಕುಟಿಲ ಹಾಗೂ ತಂತ್ರಗಾರ!! 

ಕೃಷ್ಣನಲ್ಲಿ ಪೂರ್ಣತೆಯಿದೆ, ಸಮಗ್ರತೆಯಿದೆ. ಆತನು ಎಲ್ಲಾ ಸಾಧ್ಯತೆಗಳ ಏಕಮೇವ ಪ್ರತೀಕ. ಮಾನವತೆಯ ಅಥವಾ ದಿವ್ಯತೆಯ ಎಲ್ಲಾ ಅಂಶಗಳ ಪೂರ್ಣವಾದ ಅರಳುವಿಕೆಯೇ ಕೃಷ್ಣ. ಕೃಷ್ಣನ ವ್ಯಕ್ತಿತ್ವವನ್ನು ನಿಜವಾಗಿಯೂ ಅರ್ಥಮಾಡಿಕೊಳ್ಳುವುದು ಬಹಳ ಕಠಿಣವಾದ ವಿಷಯ.



Comments

Popular posts from this blog

ಸಂಸ್ಕೃತಶಬ್ದವ್ಯುತ್ಪತ್ತಿ-ಪರ್ಯಾಯಪದ-ಕೋಶಃ (ಸಂಸ್ಕೃತ-ಸಂಸ್ಕೃತ-ಕನ್ನಡ)

ಬ್ರಾಹ್ಮಣ್ಯ ೫

ಶ್ರೀನಾರಾಯಣಶತಕಮ್