ಬ್ರಾಹ್ಮಣ್ಯ ೧
ಬ್ರಾಹ್ಮಣ್ಯ
|| ನಾನಾಗೋತ್ರೇಭ್ಯೋ ಬ್ರಾಹ್ಮಣೇಭ್ಯೋ ನಮಃ 🙏🙏🙏🥰🌹||
ವಿವಿಧ ಗೋತ್ರಜರಾದ ಬ್ರಾಹ್ಮಣಶ್ರೇಷ್ಠರಿಗೆ ನಮಸ್ಕಾರಗಳು.
ಜನ್ಮನಾ ಜಾಯತೇ ಜನ್ತುಃ
ಸಂಸ್ಕಾರಾದ್-ದ್ವಿಜ ಉಚ್ಯತೇ |
ವೇದಾಧ್ಯಯನತೋ ವಿಪ್ರೋ
ಬ್ರಹ್ಮವಿದ್ ಬ್ರಾಹ್ಮಣಃ ಸ್ಮೃತಃ ||
ಹುಟ್ಟಿನಿಂದ ಎಲ್ಲರೂ ಕೇವಲ ಜೀವರು. ಉಪನಯನಾದಿ ಸಂಸ್ಕಾರಗಳಿಂದ ೨ನೆಯ ಜನ್ಮ ಪಡೆದು ದ್ವಿ-ಜರೆನಿಸುತ್ತಾರೆ. ತದ್ ದ್ವಾರಾ ದ್ವಿಜನಾದವನು ವೇದಾಧ್ಯಯನದ ಅಧಿಕಾರ ಪಡೆಯುತ್ತಾನೆ. ವೇದಮಾತೆಯಾದ ಗಾಯತ್ರಿಯ ಉಪದೇಶ ಪಡೆದು, ಸವಿತೃಗಾಯತ್ರಿಯ ನಿತ್ಯೋಪಾಸನೆಯಿಂದ ವೇದಾಧ್ಯಯನಕ್ಕೆ ಅಧಿಕಾರಿಯಾಗುತ್ತಾನೆ. ಬಳಿಕ ವೇದಾಧ್ಯಾಯಿಯಾಗಿ ವಿಪ್ರನಾಗುತ್ತಾನೆ. ಕೊನೆಗೆ, ವೇದ-ವೇದಾಂತಾರ್ಥಾನುಸಂಧಾನದಿಂದ ಬ್ರಹ್ಮಜ್ಞಾನಿಯೂ ಬ್ರಹ್ಮನಿಷ್ಠನೂ ಆಗಿ, "ಬ್ರಹ್ಮವಿದ್ ಬ್ರಹ್ಮೈವ ಭವತಿ" ಎಂಬಂತೆ ಬ್ರಹ್ಮವನ್ನರಿತು ತಾನೂ ಈಗಾಗಲೇ ಬ್ರಹ್ಮವೇ ಆಗಿರುವೆನೆಂಬ ಅರಿವನ್ನು ಹೊಂದಿ ಜೀವನ್-ಮುಕ್ತನೆನಿಸುತ್ತಾನೆ. ಹೀಗೆ ಬ್ರಾಹ್ಮಣನೆನಿಸುತ್ತಾನೆ.
ಬ್ರಾಹ್ಮಣರಿಗೆ "ಭೂಸುರರು" ಎಂಬ ಪ್ರಶಂಸೆಯಿದೆ. ಭೂಮಿಯಲ್ಲಿರುವ ಪ್ರತ್ಯಕ್ಷ ದೇವತೆಗಳೆಂಬುದಾಗಿ. ಶ್ರೀಹರಿಯೂ ಹೀಗೆ ಹೇಳಿದ್ದಾನೆ—
ದೈವಾಧೀನಂ ಜಗತ್ಸರ್ವಂ
ಮನ್ತ್ರಾಧೀನಂ ತು ದೈವತಮ್ |
ಮನ್ತ್ರಂ ತು ಬ್ರಾಹ್ಮಣಾಧೀನಂ
ಬ್ರಾಹ್ಮಣಾ ಮಮ ದೇವತಾಃ ||
"ಈ ಜಗತ್ತೆಲ್ಲವೂ ದೇವತೆಗಳ ಅಧೀನ; ಆ ದೇವತೆಗಳು ಮಂತ್ರಗಳ ಅಧೀನರು (ಆಯಾ ದೇವತಾ ಮೂಲಮಂತ್ರ, ಸೂಕ್ತಾದಿಗಳಿಂದ ಪ್ರಸನ್ನರಾಗಿ ಒಲಿದು ವಶರಾಗಿ ವರವೀಯುವರಲ್ಲವೆ?); ಅಂತಹ ಮಂತ್ರಗಳಾದರೋ ಬ್ರಾಹ್ಮಣರ ಅಧೀನದಲ್ಲಿರುವುದು. ಹಾಗಾಗಿಯೇ, ಬ್ರಾಹ್ಮಣರೇ ನನ್ನ ದೇವರು" ಎಂದಿರುವನು ಸಾಕ್ಷಾತ್ ಪರಮಾತ್ಮನು.
ಹೀಗಾಗಿ, ಅಂತಹ ಬ್ರಾಹ್ಮಣ್ಯದ ಮಹತ್ತ್ವವನ್ನರಿತು, ಅದೇ ಸನಾತನಧರ್ಮದ ಮೂಲಾಧಾರವೆಂದರಿತು, ಬ್ರಾಹ್ಮಣಕುಲಜಾತರಾದವರು ವೃತ್ತಿನಿರಪೇಕ್ಷರಾಗಿ ಯಥಾಸಾಧ್ಯ ಬ್ರಾಹ್ಮಣ್ಯವನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಏಕೆಂದರೆ, ಅದರಲ್ಲೇ ಲೋಕಹಿತವೂ ಅಡಗಿರುವುದು. ಇಲ್ಲಿ ವೃತ್ತಿನಿರಪೇಕ್ಷರೆಂದರೆ ವೃತ್ತಿಯಲ್ಲಿ ಅಪೇಕ್ಷೆಯಿಲ್ಲದೆಂದರ್ಥವಲ್ಲ! ಯಾವುದೇ ವೃತ್ತಿಯಲ್ಲಿದ್ದರೂ ಬ್ರಾಹ್ಮಣ್ಯವನ್ನು ಬಿಡಬಾರದೆಂದರ್ಥ.
" ವರ್ಣಾನಾಂ ಬ್ರಾಹ್ಮಣೋ ಗುರುಃ "
ಬ್ರಾಹ್ಮ, ಕ್ಷಾತ್ರ, ವೈಶ್ಯ, ಶೂದ್ರ ಎಂಬೀ ೪ ವರ್ಣಗಳಲ್ಲಿ ಬ್ರಾಹ್ಮಣನೇ ಎಲ್ಲರಿಗೂ ಗುರುಸ್ಥಾನೀಯನು.
ಹಾಗಾಗಿ, ಭಾರತ ವಿಶ್ವಗುರುವಾಗುವುದರಲ್ಲಿ ಬ್ರಾಹ್ಮಣ್ಯದ ರಕ್ಷಣೆ, ವರ್ಧನೆಗಳೂ ಅವಶ್ಯವಾಗಿವೆ. ಆ ನಿಟ್ಟಿನಲ್ಲಿ ಇದೊಂದು ಕಿರು ಪ್ರಯತ್ನ.
ಇದಕ್ಕೆ ವಿಘ್ನೇಶ್ವರನು ನಿರ್ವಿಘ್ನತೆಯನ್ನೂ, ಗುರುವು ಕಾರ್ಯಸಿದ್ಧಿಯನ್ನೂ, ಕುಲದೇವರಾದ ಉಮಾಮಹೇಶ್ವರನು ಬಲವನ್ನೂ, ಇಷ್ಟದೇವರಾದ ಕೃಷ್ಣನು ಅನುಗ್ರಹವನ್ನೂ, ಶಂಕರಾದ್ಯಾಚಾರ್ಯಪರಂಪರೆ ಹಾಗೂ ಗೋಪಿತೃಮಾತ್ರಾದಿ ಹಿರಿಯರು ಆಶೀರ್ವಾದ-ಪ್ರಚೋದನೆಗಳನ್ನೂ ಉಂಟುಮಾಡಲೆಂದು ಆ ಗ್ರಾಮದೇವತೆಯಾದ ಮಹಿಷಮರ್ದಿನಿ ಹಾಗೂ ಸೀಮಾದೇವತೆಯಾದ ಪಂಚಲಿಂಗೇಶ್ವರ ಮತ್ತು ಪರಿವಾರ ದೈವಗಳಲ್ಲಿ ನಮ್ಮೆಲ್ಲರ ಒಕ್ಕೊರಲಿನ ಪ್ರಾರ್ಥನೆ.
ಇಂತು ಸಜ್ಜನ ವಿದ್ವಜ್ಜನ ವಿಧೇಯ,
ಡಾ || ಕೃಷ್ಣಮೂರ್ತಿ ಶಾಸ್ತ್ರೀ
ದಂಬೆ, ಶ್ರೀಕೃಪಾ,
ಪುಣಚ, ಬಂಟ್ವಾಳ, ದ.ಕ.
9972716812
ವೇದಗಳಲ್ಲಿ ಬ್ರಾಹ್ಮಣ್ಯ
...ಬ್ರಾಹ್ಮಣೇನ ನಿಷ್ಕಾರಣೋ ಧರ್ಮಃ ಷಡಙ್ಗೋ ವೇದೋऽಧ್ಯೇಯೋ ಜ್ಞೇಯಶ್ಚ...
(—ಸಾಯಣಾಚಾರ್ಯಕೃತ ತೈತ್ತಿರೀಯಕೃಷ್ಣಯಜುರ್ವೇದಸಂಹಿತಾಭಾಷ್ಯಪೀಠಿಕಾ)
ಬ್ರಾಹ್ಮಣನಿಂದ ಬೇರೆ ಕಾರಣವನ್ನಪೇಕ್ಷಿಸದೆ (ಕೇವಲ ಬ್ರಾಹ್ಮಣನಾಗಿ ಹುಟ್ಟಿದ ಕಾರಣದಿಂದಲೇ) ಧರ್ಮವು / ಧರ್ಮಶಾಸ್ತ್ರವು / ಸ್ಮೃತ್ಯಾದಿಗಳು, ಶಿಕ್ಷಾ ವ್ಯಾಕರಣ ಛಂದಸ್ ಜ್ಯೌತಿಷ ನಿರುಕ್ತ ಕಲ್ಪ ಎಂಬ ೬ ವೇದಾಂಗ / ಷಡಂಗ ಸಹಿತವಾಗಿ ವೇದವು ಅಧ್ಯಯನಮಾಡಲ್ಪಡತಕ್ಕದ್ದು ಹಾಗೂ ಅದರರ್ಥ ತಾತ್ಪರ್ಯಗಳು ತಿಳಿಯಲ್ಪಡತಕ್ಕದ್ದು.
ಬ್ರಾಹ್ಮಣೋऽಸ್ಯ ಮುಖಮಾಸೀತ್ |
(ಋಗ್ವೇದ ೧೦.೯೦.೧೨, ಶುಕ್ಲಯಜುರ್ವೇದ, ತೈತ್ತಿರೀಯಕೃಷ್ಣಯಜುರ್ವೇದ, ಸಾಮವೇದ, ಅಥರ್ವವೇದ)
ಬ್ರಾಹ್ಮಣನು ವಿರಾಟ್ಪುರುಷನ ಮುಖವಾಗಿದ್ದನು.
ಆತನ ಮುಖದಿಂದ ಬ್ರಾಹ್ಮಣರು ಹುಟ್ಟಿದರು. ಮುಖವು ದೇಹದ ಪ್ರಧಾನ ಭಾಗ. ಇಲ್ಲೇ ಕಣ್ಣು (ದೃಗಿಂದ್ರಿಯ), ಕಿವಿ (ಶ್ರೋತ್ರೇಂದ್ರಿಯ), ಮೂಗು (ಘ್ರಾಣೇಂದ್ರಿಯ), ಬಾಯಿ, ನಾಲಿಗೆ (ರಸನೇಂದ್ರಿಯ ಹಾಗೂ ವಾಗಿಂದ್ರಿಯ), ಮಸ್ತಿಷ್ಕ / ಮೆದುಳು— ಇವೆಲ್ಲವೂ ಇರುವುವು. ಬ್ರಾಹ್ಮಣನು ಬುದ್ಧಿಪ್ರಧಾನನಾದವನು. ಮುಖದಿಂದಲೇ ನಾವು ವ್ಯಕ್ತಿಯನ್ನು ಗುರುತಿಸಬಲ್ಲೆವು. ಹೀಗೆಯೇ, ಒಂದು ಪ್ರದೇಶದ ಬ್ರಾಹ್ಮಣರ ಆಚಾರ ವಿಚಾರಗಳ ಮಟ್ಟದಿಂದಲೇ ಆ ಭಾಗದ ಇಡೀ ಸಮಾಜದ ಮಟ್ಟವನ್ನು ಗುರುತಿಸಬೇಕು, ಅಳೆಯಬೇಕು. ಅದು ಉಚ್ಚಮಟ್ಟದ್ದಾದರೂ ಬ್ರಾಹ್ಮಣನಿಂದಾಗಿ, ನೀಚಮಟ್ಟದ್ದಾಗಲೂ ಆತನೇ ಕಾರಣ. ಹಾಗಾದ್ದರಿಂದ, ಬ್ರಾಹ್ಮಣ್ಯದ ರಕ್ಷಣೆಯಿಂದ ಸರ್ವ ವರ್ಣಗಳ ಧರ್ಮರಕ್ಷಣೆ, ವಿಶ್ವಶಾಂತಿ ಸಾಧಿಸಲು ಸಾಧ್ಯ. ಬ್ರಾಹ್ಮಣ್ಯದ ರಕ್ಷಣೆಯ ಮೊದಲ ಉಪಾಯ ಗರ್ಭಾಷ್ಟಮದಲ್ಲೇ (ಮಗುವಿಗೆ ಗರ್ಭಾವಧಿ ಸೇರಿ ೮ ವರ್ಷದಲ್ಲೇ, ಹುಟ್ಟಿ ೭ ವರ್ಷದಲ್ಲೇ) ಗಾಯತ್ರ್ಯುಪದೇಶ / ಗುರೂಪನಯನ (ಗುರುವಿನ ಸಮೀಪಕ್ಕೊಯ್ಯುವಿಕೆ) / ಬ್ರಹ್ಮೋಪದೇಶ (ವೇದಪಾಠ) ಹಾಗೂ ಕನಿಷ್ಠ ದಿನಕ್ಕೆರಡು ಬಾರಿ (ಪ್ರಾತಃಸಂಧ್ಯಾ ಹಾಗೂ ಸಾಯಂಸಂಧ್ಯಾ) ಸಂಧ್ಯಾನುಷ್ಠಾನ ಮತ್ತು ಯಥಾಸಾಧ್ಯ ಯಥಾವಕಾಶ ಮೂಲಭೂತ ಮಂತ್ರಪಾಠ ಮತ್ತು ಸಂಸ್ಕೃತಪಾಠ.
ಅಭಿ ದ್ವಿಜನ್ಮಾ ತ್ರೀ ರೋಚನಾನಿ…ಶುಶುಚಾನೋ ಅಸ್ಥಾತ್ |
(ಋಗ್ವೇದ ೧.೧೪೯.೪)
ಉಪನಯನಾದಿ ಸಂಸ್ಕಾರಗಳಿಂದ ಮರುಹುಟ್ಟು ಪಡೆದನೋ ಎಂಬಂತೆ ದ್ವಿಜನ್ಮಾ / ದ್ವಿಜ ಎನಿಸಿದ ಬ್ರಾಹ್ಮಣನು ಮೂರೂ ಲೋಕಗಳನ್ನೂ ಬೆಳಗುತ್ತಾನೆ.
ದ್ವಿಜನು ತನ್ನ ಪುಣ್ಯಬಲದಿಂದಲೇ ಬ್ರಾಹ್ಮಣಕುಲದಲ್ಲಿ ಹುಟ್ಟಲು ಸಾಧ್ಯ. ಬಳಿಕ ಮಾಡುವ ಸಂಸ್ಕಾರಗಳಿಂದಲೂ ಆತನಿಗೆ ಮತ್ತಷ್ಟು ತೇಜಸ್ಸು ವರ್ಚಸ್ಸುಗಳು ಸಿದ್ಧಿಸುತ್ತವೆ. ತನ್ನ ಲೋಕಹಿತಕಾರಕ ಗುಣ ಕರ್ಮಗಳಿಂದಲೂ, ಸಾಧು ಸಜ್ಜನಿಕೆ ಸ್ವಭಾವದಿಂದಲೂ, ಸತ್ಯ ನ್ಯಾಯ ಸರಳತೆ ಪ್ರಾಮಾಣಿಕತೆ ದರ್ಪರಹಿತತೆ ಇತ್ಯಾದಿ ದೈವೀಗುಣಗಳಿಂದಲೂ, ಬ್ರಹ್ಮವರ್ಚಸ್ಸಿನಿಂದಲೂ, ಪುಣ್ಯದ ತೇಜಸ್ಸಿನಿಂದಲೂ ಬ್ರಾಹ್ಮಣನಾದವನು ಭೂಸುರನಂತೆ ಲೋಕವೆಲ್ಲವನ್ನೂ ಭೂಮಿಯಲ್ಲಿರುವ ಸಾಕ್ಷಾತ್ ದೇವತೆಯಂತೆ ಬೆಳಗುತ್ತಾನೆ. ತನ್ನ ಸುತ್ತಮುತ್ತಲಿನ ಜನರನ್ನು ತನ್ನೆಡೆಗೆ ಸೆಳೆದುಕೊಳ್ಳುವ, ಅವರೆಲ್ಲರ ಗಮನಕ್ಕೆ ಬರುವಂತಹ ಅಲೌಕಿಕ ವರ್ಚಸ್ಸು ಬ್ರಾಹ್ಮಣನಿಗಿದೆ. ನಿತ್ಯಾನುಷ್ಠಾನ, ಗುರುಸೇವೆ, ಸ್ವಾಧ್ಯಾಯ, ಪ್ರವಚನ, ಯಜನ, ಯಾಜನ, ದಾನ, ಪ್ರತಿಗ್ರಹಾದಿ ಷಟ್ಕರ್ಮಾಚರಣ ಇತ್ಯಾದಿಗಳಿಂದ ತನ್ನ ಬ್ರಹ್ಮತೇಜಸ್ಸನ್ನು ಉಳಿಸಿ ಬೆಳೆಸಿಕೊಳ್ಳಬೇಕು.
ಅಯಂ ಸ ಹೋತಾ ಯೋ ದ್ವಿಜನ್ಮಾ |
(ಋಗ್ವೇದ ೧.೧೪೯.೫)
ಈ ದ್ವಿಜನು / ಬ್ರಾಹ್ಮಣನು ಹೋಮ ಹವನಾದಿಗಳನ್ನು ಮಾಡಿ, ದೇವತೆಗಳಿಗೆ ಹವಿರ್ದ್ರವ್ಯಗಳನ್ನು ಹೋಮಿಸಿ / ಸಮರ್ಪಿಸಿ, ದೇವತಾಪ್ರಸನ್ನತೆಯನ್ನುಂಟುಮಾಡಿ, ಲೋಕಕಲ್ಯಾಣಕಾರಣನಾಗಿರುವನು.
ಹೋಮಿಸುವುದರಿಂದ ಹೋತೃವೆನಿಸಿರುವನು. ದೇವತೆಗಳನ್ನು ಆಹ್ವಾನಿಸುವುದರಿಂದಲೂ ಆ-ಹ್ವಾತೃ / ಹೋತೃ / ಆ-ಹ್ವಾತಾ / ಹೋತಾ ಎನಿಸಿರುವನು. (ಇಲ್ಲಿ ಆ ಎಂಬುದು ಉಪಸರ್ಗ. ಹು ದಾನೇ ಧಾತು.) ಇದಕ್ಕೆ ಪೂರಕವಾಗಿ ಗೀತೆಯಲ್ಲೂ “ಸಹಯಜ್ಞಾಃ ಪ್ರಜಾಃ ಸೃಷ್ಟ್ವಾ, ಪುರೋವಾಚ ಪ್ರಜಾಪತಿಃ | ಅನೇನ ಪ್ರಸವಿಷ್ಯಧ್ವಮೇಷ ವೋऽಸ್ತ್ವಿಷ್ಟಕಾಮಧುಕ್ ||” ಎಂದು ಮುಂತಾಗಿರುವ ೩ನೆಯ ಅಧ್ಯಾಯದ ೯—೧೩ ರ ವರೆಗಿನ ಶ್ಲೋಕಗಳನ್ನೂ, ಅವುಗಳ ಅರ್ಥವನ್ನೂ ನೋಡಿರಿ. ಯಜನ ಯಾಜನಗಳು ಬ್ರಾಹ್ಮಣನ ಷಟ್ಕರ್ಮಗಳಲ್ಲಿ ಬರುತ್ತವೆ. ಯಜನವೆಂದರೆ ತಾನೇ ಸ್ವತಃ ದೇವತಾಪ್ರೀತ್ಯರ್ಥ ಯಜ್ಞ / ಪೂಜಾದಿಗಳನ್ನು ಮಾಡುವುದು. ಯಾಜನವೆಂದರೆ ತಾನು ಋತ್ವಿಜನಾಗಿ / ಪುರೋಹಿತನಾಗಿ / ಆಚಾರ್ಯನಾಗಿದ್ದುಕೊಂಡು, ಯಜಮಾನನ ಸಂಕಲ್ಪಸಿದ್ಧಿಗಾಗಿ, ಯಜಮಾನ / ಯಜ್ಞಕರ್ತೃವಿಗಾಗಿ ಮಾಡುವುದು, ಮಾಡಿಸುವುದು. ಇವೆರಡೂ ಶಾಸ್ತ್ರೋಕ್ತವಾಗಿ ಬ್ರಾಹ್ಮಣನಿಗೆ ಮಾತ್ರ ಮೀಸಲಾದ ಕರ್ಮಗಳು. ಅದರಲ್ಲೂ ವಿಶೇಷವಾಗಿ ಯಾಜನವಂತೂ ಆತನೇ ಮಾಡತಕ್ಕದ್ದೇ ಹೊರತು ಪರರು ಮಾಡಬಾರದು. ಹಾಗೂ ಶಾಸ್ತ್ರನಿಷಿದ್ಧವಾದುದನ್ನು ಮಾಡುವ ಕೆಟ್ಟ ಸಾಹಸಕ್ಕೆ ಕೈಹಾಕಿದರೆ ಯಜಮಾನನಿಗೂ, ಮಾಡಿಸುವವನಿಗೂ ಶ್ರೇಯಸ್ಸಿಗಿಂತ ಕೆಡುಕೇ ಆದೀತು; ಕೈಸುಟ್ಟುಕೊಳ್ಳಬೇಕಾದೀತು. “ಯಃ ಶಾಸ್ತ್ರವಿಧಿಮುತ್ಸೃಜ್ಯ, ವರ್ತತೇ ಕಾಮಕಾರತಃ | ನ ಸ ಸಿದ್ಧಿಮವಾಪ್ನೋತಿ, ನ ಸುಖಂ ನ ಪರಾಂ ಗತಿಮ್ ||” ಎಂಬ ಗೀತಾಚಾರ್ಯೋಕ್ತಿಯೇ ಇದಕ್ಕೆ ಸಾಕ್ಷಿ (16-23). ಅಂಥವರಿಗೆ ಸಂಕಲ್ಪಸಿದ್ಧಿಯೂ ಇಲ್ಲ; ಸುಖವೂ ಇಲ್ಲ; ಪರಗತಿ / ಮೋಕ್ಷ / ಪುಣ್ಯಲೋಕವಂತೂ ಇಲ್ಲವೇ ಇಲ್ಲ. ಹಾಗಾಗಿ, ಕಾರ್ಯಸಿದ್ಧಿಯಾಗಬೇಕಿದ್ದರೆ, ಪೂಜಾಯಜ್ಞಾದಿ ಕರ್ಮಗಳನ್ನು ಮಾಡಿಸಲು, ಬಲ್ಲ ಬ್ರಾಹ್ಮಣನನ್ನೇ ಆಶ್ರಯಿಸಬೇಕೇ ಹೊರತು ಪರರನ್ನಲ್ಲ.
ಅಸ್ತೋಷತ ಸ್ವಭಾನವೋ ವಿಪ್ರಾ ನವಿಷ್ಠಯಾ ಮತೀ |
(ಋಗ್ವೇದ ೧.೮೨.೨)
ಸ್ವಯಂ ತೇಜಸ್ವಿಗಳಾದ (ಸ್ವ-ಭಾನವಃ), ವೇದಾಧ್ಯಾಯಿಗಳಾದ ಬ್ರಾಹ್ಮಣರು (ವಿಪ್ರಾಃ), ನವೀನತಮವಾದ / ಹೊಚ್ಚಹೊಸಹೊಸದಾದ ರೀತಿಗಳಿಂದ, ನವೀನ ವಿಧಾನಗಳಿಂದ, ಹೊಸ ಹೊಸ ಸ್ತೋತ್ರಾದಿಗಳಿಂದ (ನವಿಷ್ಠಯಾ ಮತೀ), ಪರಮಾತ್ಮನನ್ನು ಸ್ತುತಿಸಿ ಸಂತೋಷಪಡಿಸಿದರು (ಅಸ್ತೋಷತ).
ಭಾ ಎಂದರೆ ಬೆಳಕು, ಪ್ರಭೆ, ಜ್ಯೋತಿ, ಪ್ರಕಾಶ ಎಂದರ್ಥ. ಭಾನುವೆಂದರೆ ಸೂರ್ಯ, ಬೆಳಗುವ ವಸ್ತು / ವ್ಯಕ್ತಿ. ಭಾನುಃ, ಭಾನೂ, ಭಾನವಃ— ಇವು ಉಕಾರಾಂತ ಪುಲ್ಲಿಂಗ ಭಾನುಶಬ್ದದ ಪ್ರಥಮಾವಿಭಕ್ತಿಯ ಏಕವಚನ, ದ್ವಿವಚನ ಹಾಗೂ ಬಹುವಚನ ರೂಪಗಳು. ಸಂಸ್ಕೃತವ್ಯಾಕರಣರೀತ್ಯಾ ವಿಸರ್ಗದ ಮುಂದೆ ಕ,ಖ,ಚ,ಛ,ಟ,ಠ,ತ,ಥ,ಪ,ಫ,ಶ,ಷ,ಸ— ಇವುಗಳನ್ನು ಬಿಟ್ಟು ಉಳಿದ ವ್ಯಂಜನಗಳು ಬಂದಾಗ ವಿಸರ್ಗಲೋಪವಾಗಿ, ವಿಸರ್ಗದ ಹಿಂದೆ ಅಕಾರವಿದ್ದಲ್ಲಿ ಓಕಾರವು ಬರುತ್ತದೆಂಬುದರಿಂದಾಗಿ ಸ್ವಭಾನವಃ ಎಂಬುದು ಸ್ವಭಾನವೋ ಎಂದಾಗಿದೆ. ಉದಾ— ರಾಮೋ ರಾಜಮಣಿಃ. ಬ್ರಾಹ್ಮಣರು ಸ್ವಯಂ ಪ್ರಕಾಶವಂತರು, ತೇಜಸ್ವಿಗಳು ಎಂದರ್ಥ. ಹಾಗಾಗಿ ನಿಜಾರ್ಥವನ್ನು ಉಳಿಸಿಕೊಳ್ಳಲು ನಮ್ಮ ಬ್ರಾಹ್ಮಣ್ಯವನ್ನು ನಾವೇ ರಕ್ಷಿಸಿಕೊಳ್ಳಬೇಕಾದುದು ಅನಿವಾರ್ಯ. ಅದಕ್ಕಾಗಿ ನಿತ್ಯವೂ ಪ್ರಾತಃಸಂಧ್ಯಾ, ಸಾಯಂಸಂಧ್ಯಾಕಾಲಗಳಲ್ಲಿ ಗಾಯತ್ರೀಜಪಾನುಷ್ಠಾನ, ಅಷ್ಟಾಕ್ಷರೀಜಪ, ಪಂಚಾಕ್ಷರೀಜಪ, ಇತ್ಯಾದಿಗಳನ್ನು ತಪ್ಪದೇ ಆಚರಿಸಬೇಕು. ಪ್ರತಿನಿತ್ಯವೂ ಜೀವನೋಪಾಯವೃತ್ತಿಯ ಬಿಡುವಿನ ವೇಳೆಯನ್ನಾದರೂ ವೇದ-ಶಾಸ್ತ್ರಾದಿಗಳ ಸ್ವಾಧ್ಯಾಯ, ಪ್ರವಚನಗಳಿಗೆ ಸಮಯ ಕೊಡಬೇಕು. ಜೀವನೋಪಾಯವೃತ್ತಿಯೇ ಮೊದಲಾದ ಲೌಕಿಕವ್ಯವಹಾರಗಳಿಗೆ ಕಡಿವಾಣ ಹಾಕಿ, ಬದುಕಲು ಎಷ್ಟು ಅತ್ಯಾವಶ್ಯಕವೋ ಅಷ್ಟೇ ತೊಡಗಿಸಿ, ಉಳಿದ ಸಮಯವನ್ನು ಬ್ರಾಹ್ಮಣನಾದವನು ತನ್ನ ವರ್ಣ-ಜಾತಿಧರ್ಮಗಳ ಅನುಷ್ಠಾನಕ್ಕೆ ಮೀಸಲಿಡದಿದ್ದಲ್ಲಿ ಪವಿತ್ರವಾದ ಬ್ರಾಹ್ಮಣಜನ್ಮವನ್ನು ತಿರಸ್ಕರಿಸಿದವರಾಗಿ, ಮುಂದೆ ಇಂತಹ ಶ್ರೇಷ್ಠ ಜನ್ಮ ಮತ್ತೆ ದೊರಕಲಾರದು.
ಅಸ್ಮಾಕಂ ಬ್ರಹ್ಮ ಪೃತನಾಸು ಜಿನ್ವತಮ್ |
(ಋಗ್ವೇದ ೧.೧೫೭.೨, ಸಾಮವೇದ ೧೭೫೯)
ಹೇ ಅಶ್ವಿನೀದೇವತೆಗಳೆ! ನಮ್ಮ ಬ್ರಾಹ್ಮಣರಿಗೆ ಯುದ್ಧಗಳಲ್ಲಿ ಸ್ಫೂರ್ತಿಯನ್ನು / ಜಯವನ್ನು ಉಂಟುಮಾಡಿರಿ.
ಬ್ರಾಹ್ಮಣರು ಯಾವಾಗಲೂ ಲೋಕಕಲ್ಯಾಣಕ್ಕಾಗಿ, ಧರ್ಮರಕ್ಷಣೆಗಾಗಿ, ದುಷ್ಟದಮನಕ್ಕಾಗಿ, ಅಧರ್ಮನಾಶಕ್ಕಾಗಿ ಹೋರಾಡುವವರಾಗಿದ್ದಾರೆ. ಹಾಗಾಗಿ, ಅವರಿಗೆ ಯುದ್ಧದಲ್ಲಿ ಸದಾ ಜಯವು ಲಭಿಸುವಂತಾಗಲಿ. ಅವರು ಸದಾ ಸತ್ಯ ಧರ್ಮ ನ್ಯಾಯಗಳ ಪಕ್ಷಪಾತಿಗಳಾಗಿರುವವರು. “ಯತೋ ಧರ್ಮಸ್ತತೋ ಜಯಃ”, “ಸತ್ಯಮೇವ ಜಯತೇ ನಾನೃತಮ್” ಎಂಬ ನುಡಿಮುತ್ತುಗಳಂತೆ, ಧರ್ಮವು ಎಲ್ಲಿಯೋ ಜಯವೂ ಅಲ್ಲಿಯೇ; ಅಂತಿಮವಾಗಿ ಸತ್ಯವೇ ಗೆಲ್ಲುವುದೇ ಹೊರತು ಸುಳ್ಳು ಗೆಲ್ಲಲಾರದು. ಹಾಗಾಗಿ, ಯಾರು ಸತ್ಯಪಕ್ಷೀಯರೋ ಅವರಿಗೇ ಸದಾ ಜಯವು ಉಂಟಾಗಲಿ.
ಹೇ ಅವಳಿ ಅಶ್ವಿನೀದೇವತೆಗಳಾದ ನಾಸತ್ಯಾ ಮತ್ತು ದಸ್ರರೇ! ನೀವು, (ಪೃತನಾಸು—) ಯುದ್ಧಗಳಲ್ಲಿ, (ಅಸ್ಮಾಕಂ ಬ್ರಹ್ಮ—) ನಮ್ಮ ಬ್ರಹ್ಮಶಕ್ತಿಯನ್ನು, (ಜಿನ್ವತಮ್—) ಜಾಗೃತಗೊಳಿಸಿ ಜಯಶೀಲರನ್ನಾಗಿ ಮಾಡಿರಿ. “ಧಿಗ್ಬಲಂ ಕ್ಷತ್ರಿಯಬಲಂ, ಬ್ರಹ್ಮತೇಜೋ ಬಲಂ ಬಲಮ್ ” ಎಂಬ ಹಾಗೆ, ಕ್ಷತ್ರಿಯರ ಬಾಹುಬಲಕ್ಕಿಂತ, ಶಸ್ತ್ರಬಲಕ್ಕಿಂತ, ಬ್ರಾಹ್ಮಣರ ತೇಜೋಬಲ, ಬ್ರಹ್ಮವರ್ಚಸ್, ತಪೋಬಲಗಳೇ ಹೆಚ್ಚು ಬಲಿಷ್ಠ ಹಾಗೂ ಶ್ರೇಷ್ಠ. ಹಾಗಾಗಿಯೇ, ಕೌಶಿಕನ ರಾಜಸೇನೆಯ ಮುಂದೆ ವಸಿಷ್ಠನ ಬ್ರಹ್ಮತೇಜವೇ ಗೆದ್ದಿತು ಎಂಬುದು ಇತಿಹಾಸ-ಪುರಾಣಗಳಿಂದ ತಿಳಿದುಬರುತ್ತದೆ. ಇನ್ನು, ಯುದ್ಧವೆಂದರೆ ಬಾಹ್ಯಯುದ್ಧವೇ ಆಗಬೇಕಿಲ್ಲ. ಅಂತರಂಗದಲ್ಲಾಗುವ ಒಳ್ಳೆಯ, ಕೆಟ್ಟ— ಯೋಚನೆಗಳ ನಡುವಿನ, ಗುಣಸ್ವಭಾವಗಳ ನಡುವಿನ, ಕರ್ಮಗಳ ನಡುವಿನ ಮಾನಸಿಕ ಸಂಘರ್ಷವೂ ಇರಬಹುದು. ಅಲ್ಲೂ ಒಳ್ಳೆಯದನ್ನೇ ಗೆಲ್ಲಿಸುವಂತಾಗಲಿ ಎಂದೂ ಅಶ್ವಿನೀದೇವತೆಗಳನ್ನು ಇಲ್ಲಿ ಪ್ರಾರ್ಥಿಸಲಾಗಿದೆ.
“ಓಂ ಭೂರ್ಭುವಸ್ಸುವಃ (ಭೂರ್ಭುವಸ್ಸ್ವಃ) | ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ | ಧಿಯೋ ಯೋ ನಃ ಪ್ರಚೋದಯಾತ್ ||” (—ಯುಜುರ್ವೇದ / ಋಗ್ವೇದ) ಎಂಬ ಸವಿತೃದೇವತಾಕವಾದ ಗಾಯತ್ರೀಚ್ಛಂದಸ್ಸಿನಲ್ಲಿರುವ ವಿಶ್ವಾಮಿತ್ರದೃಷ್ಟವಾದ ಗಾಯತ್ರೀಮಂತ್ರವೆಂದೇ ಪ್ರಸಿದ್ಧವಾದ ಈ ಮಂತ್ರದಲ್ಲೂ ಇದನ್ನೇ ಹೇಳಿದೆ. (ಓಂ—) ಆರಂಭದ ಪ್ರಣವ, ಪರಮಾತ್ಮವಾಚಕ. “ತಸ್ಯ ವಾಚಕಃ ಪ್ರಣವಃ ” (ಪಾತಂಜಲ ಯೋಗಸೂತ್ರ). ನಾದಬ್ರಹ್ಮ. (ಭೂರ್ಭುವಸ್ಸುವಃ / ಭೂರ್ಭುವಸ್ಸ್ವಃ—) ಭೂಲೋಕ, ಭುವರ್ಲೋಕ / ಅಂತರಿಕ್ಷ, ಸುವರ್ಲೋಕ / ಸ್ವರ್ಲೋಕ / ಸ್ವರ್ಗಲೋಕ / ದೇವಲೋಕ— ಈ ಮೂರೂ ಲೋಕಗಳನ್ನೂ ವ್ಯಾಪಿಸಿ ಬೆಳಗುತ್ತಿರುವ, (ತತ್—) ಆ, (ದೇವಸ್ಯ—) ಸ್ವಯಂದೀಪ್ತನಾಗಿ ಬೆಳಗುವ ದೇವನಾದ, (ಸವಿತುಃ—) ಸವಿತೃವಿನ, ಸೂರ್ಯನಾರಾಯಣನ, ಜಗತ್ ಪ್ರಸವಿತೃವಿನ, ಜಗತ್ತನ್ನು ಪ್ರಸವಿಸಿದ ಸೃಷ್ಟಿಸಿದವನ, ಸೃಷ್ಟಿಕರ್ತನ, (ವರೇಣ್ಯಂ—) ವರಣೀಯವಾದ, ಶ್ರೇಷ್ಠವಾದ, ಗ್ರಾಹ್ಯವಾದ, ಸ್ವೀಕರಿಸಲು ಯೋಗ್ಯವಾದ, (ಭರ್ಗಃ— ಭೃಜ್ಯತೇ ಕಾಮಾದಿಃ ಅನೇನ ಇತಿ) ಕಾಮಾದಿಗಳು ಸುಟ್ಟು ಭಸ್ಮಮಾಡಲ್ಪಡುತ್ತವೆ ಇವನಿಂದ ಎಂಬುದಾಗಿ ಶಿವನು;
“ಆದಿತ್ಯಾನ್ತರ್ಗತಂ ವರ್ಚೋ ಭರ್ಗಾಖ್ಯಂ ತನ್ಮುಮುಕ್ಷುಭಿಃ | ಜನ್ಮಮೃತ್ಯುವಿನಾಶಾಯ ದುಃಖಸ್ಯ ತ್ರಿತಯಸ್ಯ ಚ || ಧ್ಯಾನೇನ ಪುರುಷೋ ಯಶ್ಚ ದ್ರಷ್ಟವ್ಯಃ ಸೂರ್ಯಮಣ್ಡಲೇ ||”(—ಆಹ್ನಿಕತತ್ತ್ವಮ್) ಎಂಬಂತೆ ಸೂರ್ಯಮಂಡಲಾಂತರ್ಗತ ವರ್ಚಸ್ಸೇ ಭರ್ಗವು. ಮೋಕ್ಷಾಕಾಂಕ್ಷಿಗಳು ಜನ್ಮ ಮೃತ್ಯುಗಳ ಬಂಧನನಿವಾರಣೆಗೆ, ಆಧ್ಯಾತ್ಮಿಕ ಆಧಿಭೌತಿಕ ಆಧಿದೈವಿಕವೆಂಬ ತ್ರಿತಯ ತಾಪಗಳ (ತಾಪತ್ರಯದ) ಪರಿಹಾರಕ್ಕೆ, ಧ್ಯಾನಮುಖೇನ ಸೂರ್ಯಮಂಡಲದಲ್ಲಿ ಪರಮಪುರುಷನ ವರ್ಚಸ್ಸನ್ನು ದರ್ಶನಮಾಡಬೇಕು.
ಅಂತಹ ಭರ್ಗನನ್ನು, (ಧೀಮಹಿ—ಧ್ಯಾಯೇಮ) ಧ್ಯಾನಮಾಡೋಣ. (ಯಃ—) ಯಾವ ಅವನು, (ನಃ— ಅಸ್ಮಾಕಂ) ನಮ್ಮ, (ಧಿಯಃ—) ಬುದ್ಧಿಗಳನ್ನು, (ಪ್ರಚೋದಯಾತ್—) ಸನ್ಮಾರ್ಗದಲ್ಲಿ ಪ್ರಚೋದಿಸಲಿ.
ಇದು ಗಾಯತ್ರೀಮಂತ್ರದ ಒಂದು ತಾತ್ಪರ್ಯ. ಇನ್ನು, “ಇಷೇ ತ್ವೋರ್ಜೇ ತ್ವಾ…ದೇವೋ ವಃ ಸವಿತಾ ಪ್ರಾರ್ಪಯತು ಶ್ರೇಷ್ಠತಮಾಯ ಕರ್ಮಣೇ ”— ಎಂಬ ಯಜುರ್ವೇದಾರಂಭ ಮಂತ್ರದಲ್ಲೂ, (ಸವಿತಾ ದೇವಃ—) ಆ ಸವಿತೃದೇವನು, (ವಃ—ಯುಷ್ಮಾನ್) ನಿಮ್ಮನ್ನು, (ಶ್ರೇಷ್ಠತಮಾಯ ಕರ್ಮಣೇ—) ಶ್ರೇಷ್ಠತಮವಾದ ಕರ್ಮವನ್ನು ಮಾಡುವುದಕ್ಕೆ, (ಪ್ರಾರ್ಪಯತು—) ಪ್ರೇರಿಸಲಿ ಎನ್ನಲಾಗಿದೆ.
ಒಟ್ಟಿನಲ್ಲಿ ಈ ವೈದಿಕಪ್ರಾರ್ಥನೆಯು ಬ್ರಾಹ್ಮಣಾದಿ ಸಕಲರ ಹಿತವನ್ನು ಆ ದಿವ್ಯಶಕ್ತಿಯಲ್ಲಿ ಬೇಡಿಕೊಳ್ಳುತ್ತಿದೆಯೆಂಬುದಿದರ ಪರಮತಾತ್ಪರ್ಯವು.
ಉತ್ತಿಷ್ಠ ಬ್ರಹ್ಮಣಸ್ಪತೇ |
(ಋಗ್ವೇದ ೧.೪೦.೧, ಶುಕ್ಲಯಜುರ್ವೇದ ೩೪.೫೬)
ಹೇ ಬ್ರಾಹ್ಮಣಶ್ರೇಷ್ಠನೆ! ನೀನು ಜಾಗೃತನಾಗು, ಎದ್ದು ನಿಲ್ಲು, ಸನ್ನದ್ಧನಾಗು. ಅಜ್ಞಾನಾಂಧಕಾರವೆಂಬ ಭವಸಾಗರದಿಂದ ಮೇಲೇಳು.
ಅವಿದ್ಯಾಮಾಯೆಯೆಂಬ ಮೋಹಪಾಶವನ್ನು ಕಡಿದುಕೋ. ಬ್ರಹ್ಮಾತ್ಮಜ್ಞಾನವೆಂಬ ಪರಂಜ್ಯೋತಿಯೆಡೆ ಮುಖಮಾಡು, ಮನಮಾಡು. “ಅನಾದಿಮಾಯಯಾ ಸುಪ್ತೋ ಯದಾ ಜೀವಃ ಪ್ರಬುಧ್ಯತೇ | ಅಜಮನಿದ್ರಮಸ್ವಪ್ನಮದ್ವೈತಂ ಬುಧ್ಯತೇ ತದಾ ||” ಎಂಬ ಗೌಡಪಾದರ ಮಾಂಡೂಕ್ಯಕಾರಿಕೆಯಂತೆ ಅನಾದಿಯಾದ ಮಾಯೆಯಿಂದ ನಿದ್ರಿಸಿರುವ ಜೀವನು ಯಾವಾಗ ಎಚ್ಚರಗೊಳ್ಳುತ್ತಾನೋ ಆಗ, ಆತನು ತನ್ನನ್ನು ಜನ್ಮರಹಿತನಾದ ಅಜನೂ, ನಿದ್ರಾದಿರಹಿತನಾಗಿ ಅನಿದ್ರನೂ, ಕನಸಿಲ್ಲದೆ ಅಸ್ವಪ್ನನೂ, ತನಗಿಂತ ಬೇರೆ ಎರಡನೆಯದಾವುದೂ ಇಲ್ಲದೆ ಅದ್ವೈತನೂ ಆದ ಬ್ರಹ್ಮವೇ ಆಗಿರುವೆನೆಂದು ತಿಳಿಯುತ್ತಾನೆ. ಅದೇ ಜೀವನ್ಮುಕ್ತಿ— ದೇಹ ಜೀವಂತವಾಗಿರುವಾಗಲೇ ಆಗುವ ಮುಕ್ತಸ್ಥಿತಿ. ಅದೇ ಪ್ರಧಾನ ಮುಕ್ತಿ. ಮರಣಾನಂತರದ ವಿದೇಹಮುಕ್ತಿಯು ಅಪ್ರಧಾನ / ಗೌಣ. ಬಸವಣ್ಣನವರ “ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರಯ್ಯ, ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರಯ್ಯ” ಎಂಬ ವಚನದಂತೆ, “ಇಹ ಚೇದವೇದೀದಥ ಸತ್ಯಮಸ್ತಿ, ನ ಚೇದಿಹಾವೇದೀನ್ಮಹತೋ ವಿನಷ್ಟಿಃ” ಎಂಬ ಉಪನಿಷನ್ಮಂತ್ರದಂತೆ, ಜೀವಂತವಿರುವಾಗಲೇ ಆ ನಮ್ಮ ನಿಜಸ್ವರೂಪದ, ಪರಮಾರ್ಥಸ್ವರೂಪದ ಅರಿವು ನಮಗಾಗಬೇಕು. ಅದಾಗದಿದ್ದರೆ ದುರ್ಲಭವಾದ ಈ ನರಜನ್ಮವು ವ್ಯರ್ಥ. ಹಾಗಾಗಿ, ಆ ನಿಟ್ಟಿನಲ್ಲಿ ಇಂತಹ ವೇದಾಂತವಿಚಾರಗಳ ಶ್ರವಣ, ಮನನ, ನಿದಿಧ್ಯಾಸನ, ಸ್ವಾಧ್ಯಾಯಾದಿಗಳನ್ನು ಸದ್ಗುರುಮುಖೇನ ಮಾಡಿ ಜೀವನವನ್ನು ಸಾರ್ಥಕಪಡಿಸಿಕೊಂಡು ಧನ್ಯರಾಗೋಣ. ಜನ್ಮತಃ ಬ್ರಾಹ್ಮಣರಾಗಿ, ನಿಜಾರ್ಥದಲ್ಲಿ ಬ್ರಹ್ಮಜ್ಞಾನದಿಂದಲೂ ಬ್ರಾಹ್ಮಣರಾಗೋಣ.
ಜ್ಯೋತಿರ್ವಿಪ್ರಾಯ ಕೃಣುತಂ ವಚಸ್ಯವೇ |
(ಋಗ್ವೇದ ೧.೧೮೨.೩)
ಹೇ ಅಶ್ವಿನೀದೇವತೆಗಳೇ! ನೀವು, (ವಚಸ್ಯವೇ) ತನ್ನ ಮಂತ್ರಸ್ತೋತ್ರಯುಕ್ತ ಮಾತುಗಳಿಂದ ಸ್ತುತಿಸುತ್ತಿರುವ, (ವಿಪ್ರಾಯ) ವೇದಾಧ್ಯಾಯೀ ವಿಪ್ರನಿಗೆ (“ವೇದಾಧ್ಯಯನತೋ ವಿಪ್ರಃ”), (ಜ್ಯೋತಿಃ ಕೃಣುತಂ) ಜ್ಞಾನಜ್ಯೋತಿಯನ್ನು ಉಂಟುಮಾಡಿರಿ.
ಇದೂ ಸಹ ಅಶ್ವಿನೀದೇವತೆಗಳನ್ನು ಪ್ರಾರ್ಥಿಸುವುದಾಗಿದೆ. ಸದಾ ವೇದಾಧ್ಯಯನನಿರತನಾಗಿ, ತನ್ನ ಬದುಕನ್ನು ವೇದಸಂರಕ್ಷಣೆಗೇ ಮುಡಿಪಾಗಿಟ್ಟು, ವೇದವನ್ನೇ ತನ್ನ ಉಸಿರನ್ನಾಗಿಸಿಕೊಂಡ ವೇದಾಧ್ಯಾಯೀ ವಿಪ್ರ / ಬ್ರಾಹ್ಮಣನು ಸಾಕ್ಷಾತ್ ಸದಾಶಿವಸ್ವರೂಪನೇ ಎನ್ನಲಾಗಿದೆ. “ವೇದಃ ಶಿವಃ ಶಿವೋ ವೇದೋ ವೇದಾಧ್ಯಾಯೀ ಸದಾಶಿವಃ | ತಸ್ಮಾತ್ ಸರ್ವಪ್ರಯತ್ನೇನ ವೇದಮೇವ ಸದಾ ಪಠೇತ್ ||” ಎಂಬ ಮಾತಿನಂತೆ, ವೇದವೇ ಶಿವನು, ಶಿವನೇ ವೇದವು. ವೇದಾಧ್ಯಾಯಿಯೂ ಸದಾಶಿವನೇ. ಹಾಗಾಗಿ, ಸರ್ವಪ್ರಯತ್ನವನ್ನೂ ಮಾಡಿಯಾದರೂ ವೇದವನ್ನೇ ಸದಾ ಪಠಿಸಬೇಕು. ತನ್ಮೂಲಕ ನರನು ಶಿವನಾಗಬೇಕು, ಮಾನವನು ಮಾಧವನಾಗಬೇಕು, ಜೀವನು ಬ್ರಹ್ಮವಾಗಬೇಕು. ಬ್ರಹ್ಮಶಬ್ದಕ್ಕೆ ವೇದವೆಂಬ ಅರ್ಥವೂ ಇದೆ. ಅಮರಕೋಶದಲ್ಲಿ ಹೀಗಿದೆ— “ವೇದಸ್ತತ್ತ್ವಂ ತಪೋ ಬ್ರಹ್ಮ ಬ್ರಹ್ಮಾ ವಿಪ್ರಃ ಪ್ರಜಾಪತಿ” — ಬ್ರಹ್ಮ ಎಂಬ ನಪುಂಸಕಲಿಂಗಶಬ್ದದ ಅರ್ಥ ವೇದ, ತತ್ತ್ವ / ಪರತತ್ತ್ವ / ಪರಮಾತ್ಮ, ತಪಸ್, ಪರಬ್ರಹ್ಮ. ಇದಕ್ಕೆ ಬ್ರಹ್ಮ, ಬ್ರಹ್ಮಣೀ, ಬ್ರಹ್ಮಾಣಿ ಎಂಬುದಾಗಿ ಪ್ರಥಮಾವಿಭಕ್ತಿಯಲ್ಲಿ ಏಕ ದ್ವಿ ಬಹು ವಚನರೂಪಗಳು. ಇನ್ನು ಪುಲ್ಲಿಂಗ ಬ್ರಹ್ಮನ್ ಶಬ್ದವು ಬ್ರಹ್ಮಾ ಬ್ರಹ್ಮಾಣೌ ಬ್ರಹ್ಮಾಣಃ ಎಂದಾಗುತ್ತದೆ. ಇದಕ್ಕೆ ಅರ್ಥಗಳು— ಚತುರಾನನ ಸೃಷ್ಟಿಕರ್ತ ವಾಣೀಪತಿ ಬ್ರಹ್ಮಾ, ವೇದಾಧ್ಯಾಯೀ ವಿಪ್ರ, ಮರೀಚಿ ಕಶ್ಯಪ ದಕ್ಷಾದಿ ಪ್ರಜಾಪತಿಗಳು ಎಂಬುದಾಗಿ.
ಇಂತಹ ವೇದಾಧ್ಯಯನದ ಫಲವಾಗಿ ದೇವತಾಪ್ರಸಾದರೂಪವಾಗಿ ಬ್ರಹ್ಮಾತ್ಮೈಕ್ಯಜ್ಞಾನನಿಷ್ಠೆಯೆಂಬ ಬೆಳಕನ್ನು ಕಂಡು, ಅನಾದಿಯಾದ ಅವಿದ್ಯಾ ಅಜ್ಞಾನ ಮಾಯಾ ರೂಪವಾದ ತಮೋಂಧಕಾರವನ್ನು (ನಮ್ಮನ್ನು ಕುರುಡರನ್ನಾಗಿಸುವ, ಅಂಧಕಾರಿಯಾದ ತಮಸ್ಸನ್ನು, ಕತ್ತಲನ್ನು) ಹೋಗಲಾಡಿಸಿಕೊಳ್ಳೋಣ.
ದುರ್ಧಾಂ ದಧಾತಿ ಪರಮೇ ವ್ಯೋಮನ್ |
(ಋಗ್ವೇದ ೧೦.೧೦೯.೪)
ಬ್ರಾಹ್ಮಣಸ್ತ್ರೀಯು ತನ್ನ ತಪದ ಪ್ರಭಾವದಿಂದ ಲೋಕದಲ್ಲಿ ದುಷ್ಕರವಾದ ಕಾರ್ಯಗಳನ್ನು ಮಾಡಲು ಸಮರ್ಥಳಾಗುತ್ತಾಳೆ.
ಆಕೆಯು ಸದಾ ಪರಮಪತಿವ್ರತಾಶಿರೋಮಣಿಯಾಗಿದ್ದು, ತನ್ನ ಪತಿಯನ್ನೇ ಸದಾ ಅನುಸರಿಸುತ್ತಾಳೆ. ಆತನ ಆನಂದದಲ್ಲೇ ತನ್ನ ಸುಖವನ್ನು ಕಾಣುತ್ತಾಳೆ. ಆತನಿಗೆ ದಿನಾ ನಮಸ್ಕರಿಸಿಯೇ ತನ್ನ ದೈನಂದಿನ ಕರ್ತವ್ಯಗಳನ್ನು ನಿರ್ವಹಿಸುತ್ತಾಳೆ. ಆತನು ಉಂಡನಂತರವೇ ತಾನು ಉಣ್ಣುತ್ತಾಳೆ. ಪತಿಯುಂಡ ಎಲೆ / ತಟ್ಟೆಯಲ್ಲೇ ಉಣ್ಣುವುದು ತನಗೆ ಪರಮಶ್ರೇಯಸ್ಕರವೆಂಬ ಪವಿತ್ರಭಾವನೆಯನ್ನು ಹೊಂದಿರುತ್ತಾಳೆ. ಆಕೆ ಎಂದಿಗೂ ಪತಿಗೆ ಬಿರುನುಡಿಯನ್ನಾಡಲಾರಳು. ಆಕೆ ಪತಿ, ಮಕ್ಕಳಿಗಾಗಿಯೇ ಸದಾ ಪ್ರಾರ್ಥಿಸುತ್ತಾಳೆ. ಆಕೆಯು ಮಕ್ಕಳಿಗೆ ಉತ್ತಮ ಸಂಸ್ಕಾರಮೌಲ್ಯಗಳನ್ನು, ಸನಾತನ ಆಚಾರ ವಿಚಾರಗಳನ್ನು ಕಲಿಸಿ ಅಳವಡಿಸುವಂತೆ ಮಾಡುತ್ತಾಳೆ. ಆಕೆ ತನ್ನ ಮಕ್ಕಳಿಗೆ ಭಾರತೀಯ ವಿದ್ಯೆಗಳಾದ ವೇದ, ಶಾಸ್ತ್ರ, ಪುರಾಣ, ಸಂಸ್ಕೃತ, ಭಾರತೀಯ ಕಲೆಗಳು, ಆಯುರ್ವೇದಾದಿಗಳನ್ನು ಕಲಿಸಲು ಉತ್ಸುಕಳಾಗಿರುತ್ತಾಳೆ. ಒಟ್ಟಿನಲ್ಲಿ ಬ್ರಾಹ್ಮಣಪತ್ನಿಯು ತನ್ನ ತವರುಮನೆ-ಮದುವೆಯಾಗಿ ಸೇರಿದ ಮನೆಗಳೆರಡನ್ನೂ ಪ್ರಕಾಶಿಸುವಂತೆ ಮಾಡಬಲ್ಲ ಭಾಗ್ಯಲಕ್ಷ್ಮಿಯೂ, ಸರಸ್ವತೀಸ್ವರೂಪೆಯೂ, ಅನ್ನಪೂರ್ಣೆಯೂ, ದುಷ್ಟಶಿಕ್ಷಣದಲ್ಲಿ ಕಾಳೀಸ್ವರೂಪಿಣಿಯೂ ಆಗಿರುವಳು. ಇದು ವೇದೋಕ್ತವಾದ ಬ್ರಾಹ್ಮಣಸ್ತ್ರೀಯ ಮಹತ್ತ್ವ.
ದ್ವಿಜನ್ಮಾನೋ ಯ ಋತಸಾಪಃ ಸತ್ಯಾಃ |
(ಋಗ್ವೇದ ೬.೫೦.೨)
ಬ್ರಾಹ್ಮಣರು ಸತ್ಯಮಾರ್ಗದಲ್ಲೇ ಗಮಿಸುವವರೂ, ಸತ್ಯಾಚಾರಪರರೂ, ಸತ್ಯವನ್ನೇ ನುಡಿಯುವವರೂ ಆಗಿರುತ್ತಾರೆ.
ಸಾಮಾನ್ಯವಾಗಿ, ಬ್ರಾಹ್ಮಣರು ಬಹುಮಟ್ಟಿಗೆ ಪ್ರಾಮಾಣಿಕರಾಗಿರುತ್ತಾರೆ. ಅವರು ಸುಳ್ಳು ಹೇಳಲು ಬಯಸುವುದಿಲ್ಲ. ಸುಳ್ಳು ಹೇಳಲೂ ಬಾಯಿ ಬಾರದು ಅವರಿಗೆ. ಮುಕ್ತವಾಗಿ ತಮ್ಮ ವಿಚಾರ, ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದರಿಂದ ಎಲ್ಲರೂ ಅವರನ್ನು ನಂಬುತ್ತಾರೆ. ಯಾವುದೇ ವಿಚಾರ ಕೇಳಿ ತಿಳಿಯಬೇಕಿದ್ದರೆ ಬ್ರಾಹ್ಮಣರಿಂದಲೇ ಕೇಳಲು ಇಷ್ಟಪಡುತ್ತಾರೆ. ಯಾಕೆಂದರೆ, ಅವರು ಸುಳ್ಳು ಹೇಳರು ಎಂಬ ವಿಶ್ವಾಸ ಎಲ್ಲರಿಗೂ. ಅದನ್ನು ಬ್ರಾಹ್ಮಣರು ಉಳಿಸಿಕೊಳ್ಳಬೇಕು.
ಹಾಗೆಯೇ, ಬ್ರಾಹ್ಮಣರು ಸತ್ಯವಾದ ಆಚಾರವನ್ನೇ ಅನುಸರಿಸುತ್ತಾರೆ ಅನುಸರಿಸತಕ್ಕದ್ದು. ಯಾಕೆಂದರೆ, ಅವರು ಲೋಕಕ್ಕೇ ಆದರ್ಶಪ್ರಾಯರೂ, ಗುರುಸ್ಥಾನೀಯರೂ ಆಗಿರಬೇಕು. ಅದು ಬ್ರಾಹ್ಮಣವರ್ಣದ ಗುಣ, ಕರ್ತವ್ಯ, ಧರ್ಮ. ಅವರು ಸತ್ಯವನ್ನು ಬಿಡದಿದ್ದರೆ ಲೋಕವೇ ಸತ್ಯದಿಂದ ತುಂಬಿರಬಲ್ಲುದು. ಹಾಗಾಗಿ ಲೋಕಧರ್ಮವು ಬ್ರಾಹ್ಮಣರ ಧರ್ಮಪಾಲನೆಯಲ್ಲೇ ಅಡಗಿದೆ.
ಬ್ರಹ್ಮಣಸ್ಪತೇರಭವದ್ ಯಥಾವಶಂ ಸತ್ಯೋ ಮನ್ಯುಃ |
(ಋಗ್ವೇದ ೨.೨೪.೧೪)
ಶ್ರೇಷ್ಠಬ್ರಾಹ್ಮಣನ ಕೋಪವು ಸತ್ಯವಾಗಿ ಸಿದ್ಧಿಸುವುದು.
ಅಂದರೆ, ಬ್ರಹ್ಮಜ್ಞಾನಿಗೆ ಅಥವಾ ಉತ್ತಮ ಬ್ರಾಹ್ಮಣನಿಗೆ ಅಪಚಾರ, ಅವಮಾನ, ನಿಂದೆಗಳಾದರೆ, ಅಂತಹ ಬ್ರಾಹ್ಮಣನಿಗುಂಟಾಗುವ ಶೋಕ ಕೋಪಗಳ ಪ್ರಭಾವದಿಂದ, ಅವನು ತನಗೆ ತೊಂದರೆಕೊಟ್ಟವರಿಗೇನಾಗಬೇಕೆಂದು ಸಂಕಲ್ಪಿಸುತ್ತಾನೋ ಆ ಸಂಕಲ್ಪ / ಶಾಪವು ನಿಶ್ಚಯವಾಗಿಯೂ ಸತ್ಯವಾಗಿಬಿಡುವುದು. ಹಾಗಾಗಿ, ಬ್ರಹ್ಮಹತ್ಯಾಪಾಪವು ತೊಳೆಯಲು ದುಸ್ಸಾಧ್ಯವಾದ ಪಂಚಮಹಾಪಾತಕಗಳಲ್ಲೊಂದಾಗಿರುವುದು. ಹಾಗೆಯೇ ಬ್ರಹ್ಮಸ್ವಹರಣ ಅರ್ಥಾತ್ ಬ್ರಾಹ್ಮಣರ ಸೊತ್ತನ್ನು ಅಪಹರಿಸಿದರೂ ಮಹಾಪಾತಕವೇ. ಯಾಕೆಂದರೆ, ಬ್ರಾಹ್ಮಣನ ಬದುಕು “ಲೋಕಾಃ ಸಮಸ್ತಾಃ ಸುಖಿನೋ ಭವನ್ತು, ಸರ್ವೇ ಜನಾಸ್ಸುಖಿನೋ ಭವನ್ತು” ಎಂಬ ಹಾಗೆ ಯಾರಿಗೂ ತೊಂದರೆಕೊಡದ, ಸರ್ವರ ಹಿತವನ್ನು ಬಯಸುವ ಪುಣ್ಯಜನ್ಮದ ಬದುಕಾಗಿರುವುದು. ಅಂಥವರಿಗೆ ಪೀಡೆ ಕೊಟ್ಟವನು ಖಂಡಿತವಾಗಿಯೂ ಏಳೇಳು ಜನ್ಮಕ್ಕೂ ಉದ್ಧಾರವಾಗಲಾರ. ಬದಲಿಗೆ ನರಕಯಾತನೆಯನ್ನು ಅನುಭವಿಸಬೇಕಾಗುತ್ತದೆ. ಮುಂದೆ ನಾಯಿ, ಹಂದಿ ಮುಂತಾದ ನಿಕೃಷ್ಟ ಜನ್ಮಗಳನ್ನೂ ಪಡೆಯಬೇಕಾಗುತ್ತದೆ. ಇದು ಶಾಸ್ತ್ರವಚನ.
ಹಾಗಾಗಿ, ಬ್ರಾಹ್ಮಣರಿಗೆ ಯಥಾಯೋಗ್ಯ ಪ್ರಾಮಾಣಿಕ ಗೌರವವನ್ನು ಕೊಟ್ಟು ಬಾಳಿದವನು ಖಂಡಿತವಾಗಿಯೂ ಉದ್ಧಾರವಾಗುವುದನ್ನು ನಾವು ಲೋಕದಲ್ಲಿ ಕಾಣುತ್ತೇವೆ. ಯಾಕೆಂದರೆ ಅದು ಪರಮಾತ್ಮನ ನೇರ ಆಜ್ಞೆ ಹಾಗೂ ಅವನದೇ ರೂಪವಾದ ವೇದಶಾಸ್ತ್ರಾದಿಗಳ ಆದೇಶ-ಉಪದೇಶಗಳೂ ಹೌದು. ಹಾಗಾಗಿ, ಬ್ರಾಹ್ಮಣರೂ ಕೂಡ ಇಂತಹ ಪಾವಿತ್ರ್ಯವನ್ನು ಉಳಿಸಿಕೊಳ್ಳಲು ತಾವೂ, ತಮ್ಮ ಮಕ್ಕಳೂ ಬ್ರಾಹ್ಮಣಧರ್ಮಾನುಷ್ಠಾನವನ್ನು ಎಂದೆಂದೂ ಬಿಡಬಾರದು. ಶ್ರದ್ಧೆಯಿಂದ ಮಾಡಿದರೆ ಅದರಿಂದ ಬ್ರಹ್ಮವರ್ಚಸ್ಸು, ತಪೋಬಲಗಳು ವೃದ್ಧಿಯಾಗುವುದರಲ್ಲಿ ಸಂದೇಹವಿಲ್ಲ.
ಬ್ರಹ್ಮದ್ವಿಷಃ ಶರವೇ ಹನ್ತವಾ ಉ |
(ಋಗ್ವೇದ ೯೦.೧೮೨.೩)
ದೇವಗುರುವಾದ ಬೃಹಸ್ಪತಿಯು ಬ್ರಹ್ಮದ್ವೇಷಿಗಳಾದ, ಬ್ರಹ್ಮಹಿಂಸಕರಾದ ಬ್ರಹ್ಮಶತ್ರುಗಳನ್ನು ಸಂಹರಿಸುತ್ತಾನೆ.
ಯಾಕೆಂದರೆ, ಧರ್ಮದ ರಕ್ಷಣೆ ಇಂದ್ರಾದಿ ದೇವತೆಗಳ ಜವಾಬ್ದಾರಿ. ಅವರೆಲ್ಲಾದರೂ ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸದೇ ಕರ್ತವ್ಯಲೋಪವನ್ನೆಸಗಿ ಲೋಕದಲ್ಲೆಲ್ಲಾದರೂ ಬ್ರಾಹ್ಮಣರನ್ನು ದ್ವೇಷಿಸಿ ಹಿಂಸಿಸುತ್ತಿರುವ ಬ್ರಹ್ಮಶತ್ರುಗಳು ಕಂಡುಬಂದರೆ, ದೇವತೆಗಳ ಗುರುವಾದ ಬೃಹಸ್ಪತ್ಯಾಚಾರ್ಯರು ಕೂಡಲೇ ಅಂಥವರ ಹುಟ್ಟಡಗಿಸಿ ನಿಃಶೇಷವಾಗಿ ನಿರ್ಮೂಲಮಾಡಿಬಿಡುತ್ತಾರೆ. ಯಾಕೆಂದರೆ, ದುಷ್ಟ ಶಿಕ್ಷಣ—ಶಿಷ್ಟರಕ್ಷಣ ಪರಮಾತ್ಮನ ಸಂಕಲ್ಪವಲ್ಲವೆ? ಅದನ್ನು ಮೀರಲು ಯಾರಿಗಾದರೂ ಸಾಧ್ಯವೆ? “ತೇನ ವಿನಾ ತೃಣಮಪಿ ನ ಚಲತಿ” ಆತನ ಹೊರತು ಒಂದು ಹುಲ್ಲುಕಡ್ಡಿಯೂ ಅಲುಗಾಡಲಾರದು. ಹಾಗಿರುವಾಗ, ಪರಮಾತ್ಮನೇ ಬ್ರಾಹ್ಮಣರನ್ನು ಪೂಜ್ಯರೆಂದಮೇಲೆ, ಆತನೇ ಸೃಷ್ಟಿಸಿದವರಲ್ಲಿ ಯಾರಾದರೂ ಬ್ರಾಹ್ಮಣಪೀಡಕರಿದ್ದರೆ ಅವನು ಸಹಿಸಿಯಾನೇ? ಪರಮಾತ್ಮನದೇ ರೂಪವಾದ ವೇದಮಂತ್ರಗಳನ್ನು ಅನಾದಿಕಾಲದಿಂದಲೂ ಯಥಾಸ್ಥಿತಿಯಲ್ಲಿ ಯಥಾಶಕ್ತಿ ಕಾಯ್ದುಕೊಂಡು ಬರಲೆಂದೇ ತಮ್ಮ ಬದುಕನ್ನು ಮುಡಿಪಾಗಿಟ್ಟ, ಲೋಕಹಿತವನ್ನೇ ಸದಾ ಬಯಸುವ, ಸತ್ಪುರುಷರಾದ ಬ್ರಾಹ್ಮಣರು ಧರ್ಮದ ಅಡಿಪಾಯವಾಗಿರುವಾಗ, ಅವರ ರಕ್ಷಣೆಯೂ ಧರ್ಮರಕ್ಷಣೆಯೇ. ಹಾಗಾಗಿ, ಸದಾ ಪರಮಾತ್ಮನು ಬ್ರಾಹ್ಮಣಪಕ್ಷಪಾತಿಯೆಂದರೂ ತಪ್ಪಲ್ಲ. ಯಾಕೆಂದರೆ ಅವರೂ ಧರ್ಮಪಕ್ಷಪಾತಿಗಳಲ್ಲವೆ? ಈ ಮಾತಿಗೆ ಅಪಚಾರವಾಗದಂತೆ ನಾವೂ ನಡೆದು, ನಮ್ಮ ಮಕ್ಕಳನ್ನೂ ಇದೇ ಹಾದಿಯಲ್ಲಿ ಮುನ್ನಡೆವಂತೆ ಮಾಡೋಣ. ಆಗದೆ?
ಬ್ರಾಹ್ಮಣಾ ವ್ರತಚಾರಿಣಃ |
(ಋಗ್ವೇದ ೭.೧೦೩.೯)
ಬ್ರಾಹ್ಮಣರು ಸದಾಚಾರದ ನಿಯಮಗಳನ್ನು ಪಾಲನೆ ಮಾಡುವವರಾಗಿದ್ದಾರೆ.
ಸಾಮಾನ್ಯವಾಗಿ ಬ್ರಾಹ್ಮಣರು ಕಾನೂನು, ಲೋಕನೀತಿ, ವ್ಯವಹಾರನಿಯಮ, ಶಿಷ್ಟಾಚಾರ, ಸತ್ಯ, ನ್ಯಾಯ, ಪ್ರಾಮಾಣಿಕತೆ, ನಿರಾಡಂಬರತೆ, ಸರಳತೆ, ಅಪರಿಗ್ರಹ, ಅಸ್ತೇಯ, ಇಂದ್ರಿಯನಿಗ್ರಹ / ದಮ, ಮನೋನಿಗ್ರಹ / ಶಮ— ಇತ್ಯಾದಿಗಳ ಮಿತಿಯನ್ನು ಮೀರದೇ ಬಾಳಲು ಶತಾಯ ಗತಾಯ ಪ್ರಯತ್ನಿಸುತ್ತಾರೆ. ಎಲ್ಲೋ ನೂರಕ್ಕೆ ಒಂದೋ ಎರಡೋ ಪ್ರಕರಣಗಳಲ್ಲಿ ಸದಾಚಾರವನ್ನು ಮೀರಿದ್ದಿರಬಹುದು. ಆದರೆ, ಬ್ರಾಹ್ಮಣೇತರರಲ್ಲಿ ನೂರಕ್ಕೆ 20-30 ಇಂತಹ ಪ್ರಕರಣಗಳು ಕಂಡುಬರುತ್ತವೆ. ಇನ್ನು, ಅನ್ಯಮತೀಯರಲ್ಲಿ ಇದಕ್ಕಿಂತಲೂ ಹೆಚ್ಚು ದುರಾಚಾರಗಳು ಸಾಮಾನ್ಯವಾಗಿ ಇವೆ. ಹೀಗಾಗಿ, ಸನಾತನಧರ್ಮವನ್ನು ಕೆಡಿಸಲು ಅನ್ಯರು ಮೊದಲು ಬ್ರಾಹ್ಮಣರನ್ನು ಕೆಡಿಸಲು ಪೀಡಿಸಲು ಗುರಿಮಾಡಿಕೊಳ್ಳುತ್ತಾರೆ. ಏಕೆಂದರೆ, ಬ್ರಾಹ್ಮಣರು ಸನಾತನ ಧರ್ಮದ ಅಡಿಪಾಯ. ಅವರು ಕೆಟ್ಟರೆ ಧರ್ಮವೇ ಸುಲಭವಾಗಿ ಕೆಡುತ್ತದೆ. ಪಂಚಾಂಗವೇ ಸಡಿಲವಾದರೆ ಇಡೀ ಸೌಧವೇ ಪತನಹೊಂದುವುದಿಲ್ಲವೆ? ಹಾಗಾಗಿ ಬ್ರಾಹ್ಮಣರು ಸದಾಕಾಲವೂ ಸದಾಚಾರ, ಸದ್ವಿಚಾರ, ಸನ್ನಿಷ್ಠೆ, ಸದ್ಬುದ್ಧಿ, ಸಜ್ಜನತೆ, ಸೌಮನಸ್ಯ, ಸಂತಭಾವ, ಸಾತ್ತ್ವಿಕತೆಗಳನ್ನು ಕಾಪಾಡಿಕೊಳ್ಳಲು ಸರ್ವಥಾ ಪ್ರಯತ್ನಶೀಲರಾಗಿರಬೇಕು, ಸಾಧಕರಾಗಿರಬೇಕು, ಸಿದ್ಧರಾಗಬೇಕು.
ಬ್ರಾಹ್ಮಣಾಸಃ ಸೋಮಿನೋ ವಾಚಮಕ್ರತ |
(ಋಗ್ವೇದ ೭.೧೦೩.೮)
(ಸೋಮಿನಃ) ಸೋಮಪಾನವನ್ನು ಮಾಡುವ, (ಬ್ರಾಹ್ಮಣಾಸಃ) ಬ್ರಾಹ್ಮಣರು, (ವಾಚಮ್) ಮಂತ್ರಪಾಠವನ್ನು, (ಅಕ್ರತ) ಮಾಡಿದರು.
ಸೋಮಲತೆಯನ್ನು ಜಜ್ಜಿ, ಹಿಂಡಿ ಸೋಮರಸವನ್ನು ಪಡೆಯುತ್ತಾರೆ. ಅದನ್ನು ಸೋಮಯಾಗಾದಿ ಶ್ರೌತಯಾಗಗಳಲ್ಲಿ ಬಳಸುತ್ತಾರೆ. ಸೋಮಯಾಜಿಗಳು ಸೋಮಪಾನವನ್ನೂ ಮಾಡುತ್ತಾರೆ. ಅಂತಹ ಸೋಮಪರು / ಸೋಮಿಗಳು ಆದ ಬ್ರಾಹ್ಮಣರು ವೇದಮಂತ್ರಗಳೆಂಬ ವಾಕ್ಕುಗಳನ್ನು ಪಠಿಸುತ್ತಾರೆ. ವೇದಪಾಠಮಾತ್ರದಿಂದಲೇ ತನುಮನಗಳ ಶುದ್ಧಿ, ವಾತಾವರಣದ ಶುದ್ಧಿ ಹಾಗೂ ಲೋಕಶುಭವುಂಟಾಗುತ್ತದೆ. ಹಾಗಾಗಿ, ಬ್ರಾಹ್ಮಣರ ನಿತ್ಯ ವೇದಪಾಠವು ಲೋಕಕ್ಕೇ ಮಂಗಲಕರವಾದುದು; ಎಲ್ಲರಿಗೂ ಕಲ್ಯಾಣವನ್ನುಂಟುಮಾಡುವುದು. ಹಾಗಾಗಿ, ವೇದಾಧ್ಯಯನ, ವೇದಪಠನಗಳನ್ನು ಬ್ರಾಹ್ಮಣರು ನಿತ್ಯವೂ ಮಾಡಬೇಕು.
ಭೀಮಾ ಜಾಯಾ ಬ್ರಾಹ್ಮಣಸ್ಯೋಪನೀತಾ |
(ಋಗ್ವೇದ ೧೦.೧೦೯.೪)
ಬ್ರಾಹ್ಮಣಪತ್ನಿಯು ಅಪಹೃತಳಾಗಿ ಪರರ ಬಳಿಗೊಯ್ಯಲ್ಪಟ್ಟರೆ ಉಗ್ರಸ್ವರೂಪಿಣಿ / ಭೀತಿಯನ್ನುಂಟುಮಾಡುವವಳು ಆಗುತ್ತಾಳೆ.
ಬ್ರಾಹ್ಮಣಪತ್ನಿಯು ಗುರುಪತ್ನಿಯು. ಯಾಕೆಂದರೆ, “ವರ್ಣಾನಾಂ ಬ್ರಾಹ್ಮಣೋ ಗುರುಃ” ೪ ವರ್ಣದವರಿಗೂ ಬ್ರಾಹ್ಮಣನೇ ಗುರುವು / ಗುರುಸ್ಥಾನೀಯನು. ಹಾಗಾಗಿ ಆತನ ಪತ್ನಿಯನ್ನು ಬಲಾತ್ಕರಿಸಿದರೆ “ಗುರುತಲ್ಪಗಮನ” ಎಂಬ ಪಂಚಮಹಾಪಾತಕಗಳಲ್ಲೊಂದನ್ನು ಹೊಂದುತ್ತಾನೆ. ಹಾಗಾಗಿ ಬ್ರಾಹ್ಮಣಪತ್ನಿಯನ್ನು ಗೌರವದಿಂದ ಕಾಣಬೇಕು. ಅದರಿಂದಲೇ ಗುರುದೇವತಾಪ್ರಸನ್ನತೆ ಹಾಗೂ ಆತ್ಮೋದ್ಧಾರ.
ಯದ್ ಬ್ರಹ್ಮಣಿ ರಾಜನಿ ವಾ ಯಜತ್ರಾ |
(ಋಗ್ವೇದ ೧.೧೦೮.೭)
ಪೂಜ್ಯರಾದ ಇಂದ್ರ-ಅಗ್ನಿಗಳು ಕ್ರಮವಾಗಿ ಜ್ಞಾನಿಯಾದ ಬ್ರಾಹ್ಮಣನಲ್ಲೂ ಪರಾಕ್ರಮಿಯಾದ ಕ್ಷತ್ರಿಯ ರಾಜನಲ್ಲೂ ವಾಸವಾಗಿರುತ್ತಾರೆ.
ಸಮಾಜ ೪ ವರ್ಗದ ಜನರ ಸಮೂಹ. ಬುದ್ಧಿಪ್ರಧಾನ ಬ್ರಾಹ್ಮಣರು, ಬಲಪ್ರಧಾನ ಕ್ಷತ್ರಿಯರು, ಸಂಪತ್ಪ್ರಧಾನ ವೈಶ್ಯರು ಹಾಗೂ ಸೇವಾಪ್ರಧಾನ ಶೂದ್ರರು. ಇವೇ ೪ ವರ್ಣಗಳು. ಇವು ಪ್ರಧಾನವಾಗಿ ಗುಣಕರ್ಮಗಳಿಂದ ನಿರ್ಧರಿತವಾದರೂ, ವಂಶವಾಹಿಗಳ ಮೂಲಕ ಹುಟ್ಟಿನಿಂದಲೂ ಗುಣಕರ್ಮಗಳು ಮುಂದುವರಿಯುವುದು ಸಹಜ. “ಚಾತುರ್ವರ್ಣ್ಯಂ ಮಯಾ ಸೃಷ್ಟಂ ಗುಣಕರ್ಮವಿಭಾಗಶಃ | ತಸ್ಯ ಕರ್ತಾರಮಪಿ ಮಾಂ ವಿದ್ಧ್ಯಕರ್ತಾರಮವ್ಯಯಮ್ ||” ಇದು ಗೀತಾಚಾರ್ಯನ ಉಪದೇಶ. ಅಲ್ಲದೆ, ಈ ಕಲಿಯುಗದಲ್ಲಿ ಯಾವೊಬ್ಬನೂ ಒಂದೇ ಉದ್ಯೋಗವನ್ನು ಮಾಡದೆ ಮಿಶ್ರಕರ್ಮಿಯಾಗಿರುವನು. ಹಾಗೆಯೇ, ಗುಣವೂ ಸದಾ ಒಂದೇ ತೆರನಾಗಿರದು. ಹಾಗಾಗಿಯೇ ಈ ಕಲಿಗಾಲದಲ್ಲಿ ಗುಣಕರ್ಮಗಳಿಂದಲೇ ವರ್ಣನಿರ್ಧಾರ ಕಷ್ಟಸಾಧ್ಯ. ಅದಕ್ಕಾಗಿಯೇ, ಜನ್ಮದಿಂದಲೇ ಜಾತಿಪದ್ಧತಿ ಬಂದಿರುವುದು. ವರ್ಣವನ್ನೀಗ ಜಾತಿಯಿಂದಲೇ ಪ್ರಧಾನವಾಗಿ ನಿರ್ಧರಿಸಲಾಗುತ್ತದೆ. ಹಾಗಾಗಿ ಬ್ರಾಹ್ಮಣನ ಮಗ ಬ್ರಾಹ್ಮಣ, ಕ್ಷತ್ರಿಯನ ಮಗ ಕ್ಷತ್ರಿಯ. ಲೋಕದಲ್ಲಿ ಬ್ರಾಹ್ಮ-ಕ್ಷಾತ್ರಗಳಲ್ಲಿ ಇಂದ್ರ-ಅಗ್ನಿಗಳು ವಾಸವಾಗಿರುತ್ತಾರೆಂಬುದೀ ವೇದವಾಣಿಯ ಅರ್ಥ. ಮನೋಬುದ್ಧೀಂದ್ರಿಯಗಳ ಅಧಿದೇವತೆಯಾದ ಇಂದ್ರನು ಬುದ್ಧಿಪ್ರಧಾನರಾದ ಬ್ರಾಹ್ಮಣರಲ್ಲಿ ಸಾನ್ನಿಧ್ಯ ವಹಿಸಿರುತ್ತಾನೆ. ಹಾಗೆಯೇ, “ಇಂದ / ಇದಿ ಪರಮೈಶ್ವರ್ಯೇ ” ಎಂಬ ಧಾತುವಿನಿಂದಾದ ಇಂದ್ರಶಬ್ದದ ಅರ್ಥ ಪರಮೇಶ್ವರ, ಪರಮಾತ್ಮಾ. ಬ್ರಾಹ್ಮಣರು ಭೂಮಿಯ ಪ್ರತ್ಯಕ್ಷ ದೇವತೆಗಳು. ಹಾಗಾಗಿಯೇ ಅವರಲ್ಲಿ ಇಂದ್ರನಿದ್ದಾನೆ.
ಇನ್ನು ಅಗ್ನಿಯ ಸುಡುವ ಶಕ್ತಿಯೇ ಪ್ರಧಾನವಾದ್ದರಿಂದ, ಶಕ್ತಿಪ್ರಧಾನರಾದ ಕ್ಷತ್ರಿಯರಲ್ಲೇ ಅಗ್ನಿಯು ನೆಲೆಸಿದ್ದಾನೆ. ಕ್ಷಾತ್ರತೇಜಸ್ಸು ಶತ್ರುಗಳನ್ನು ದಹಿಸುವ ಅಗ್ನಿಯಂತೆ. ಬ್ರಹ್ಮವರ್ಚಸ್ಸು ಜ್ಞಾನಸೂರ್ಯನಂತೆ, ಜ್ಞಾನೇಂದ್ರನಂತೆ. ಹಾಗಾಗಿ ಇಲ್ಲಿ ಬ್ರಾಹ್ಮಕ್ಷಾತ್ರಗಳನ್ನು ಇಂದ್ರಾಗ್ನಿಸ್ವರೂಪರೆಂದು ಪ್ರಶಂಸಿಸಲಾಗಿದೆ.
ವಿಪ್ರಾಸೋ ವಾ ಧಿಯಾಯವಃ |
(ಋಗ್ವೇದ ೧.೮.೬)
ಪವಿತ್ರ ಆಚಾರವುಳ್ಳ ಬ್ರಾಹ್ಮಣರು ಆದರಣೀಯರಾಗಿದ್ದಾರೆ.
ವೇದಾಧ್ಯಯನಸಂಪನ್ನತೆಯಿಂದ ವಿಪ್ರರೆನಿಸಿದ ಬ್ರಾಹ್ಮಣರು ತಮ್ಮ ಧೀಶಕ್ತಿ / ಬುದ್ಧಿಬಲದಿಂದಲೂ ಪ್ರಸಿದ್ಧರಾಗಿರುವರು. ಅವರು ಬುದ್ಧಿವಂತ ಜನಾಂಗವಾಗಿದ್ದಾರೆ. ಹಾಗಾಗಿಯೇ, “ವರ್ಣಾನಾಂ ಬ್ರಾಹ್ಮಣೋ ಗುರುಃ” ಎಲ್ಲ ವರ್ಣದವರಿಗೂ ಬ್ರಾಹ್ಮಣನೇ ಗುರುಸ್ಥಾನೀಯನಾಗಿರುವನು. ಆದ್ದರಿಂದ, ಬ್ರಾಹ್ಮಣರು ತಾವೂ ವೇದಶಾಸ್ತ್ರಪುರಾಣಜ್ಞಾನಸಂಪನ್ನರಾಗಿ, ತಮ್ಮ ಮಕ್ಕಳಿಗೂ ಇವನ್ನೆಲ್ಲ ಕಲಿಯುವ ಅವಕಾಶ ಮಾಡಿಕೊಡಬೇಕು. ಹಾಗಾದರೆ ಮಾತ್ರ ಲೋಕದಲ್ಲಿ ಬ್ರಾಹ್ಮಣತ್ವವೂ ಉಳಿದೀತು; ಲೋಕಶಾಂತಿ ಕಲ್ಯಾಣಗಳೂ ಆದಾವು. ಇಲ್ಲದಿದ್ದರೆ ವಿಶ್ವವು ಸದಾ ಅಧರ್ಮ, ಅಶಾಂತಿಗಳ ನೆಲೆವೀಡಾಗುವುದು ಖಚಿತ.
ವಿಶ್ವಾ ದಧೇ ವಾರ್ಯಾಣಿ ಶ್ರವಸ್ಯಾ |
(ಋಗ್ವೇದ ೧.೧೪೯.೫)
ಯಜ್ಞಕರ್ತೃಗಳಾದ ಬ್ರಾಹ್ಮಣರು ಎಲ್ಲ ಉತ್ಕೃಷ್ಟ ಐಶ್ವರ್ಯಗಳನ್ನು ಪ್ರಾಪ್ತಿಮಾಡಿಕೊಳ್ಳುವರು.
ಇಲ್ಲಿ ಉತ್ಕೃಷ್ಟ ಐಶ್ವರ್ಯವೆಂದು ಹೇಳಿರುವುದರ ರಹಸ್ಯವೇನು? ಲೌಕಿಕವು ಉತ್ಕೃಷ್ಟವಲ್ಲ. ಅದು ಅಸ್ಥಿರ. “ಅಸ್ಥಿರಂ ಜೀವಿತಂ ಲೋಕೇ, ಅಸ್ಥಿರೇ ಧನಯೌವನೇ | ಅಸ್ಥಿರಾಃ ಪುತ್ರದಾರಾಶ್ಚ, ಧರ್ಮಕೀರ್ತಿರ್ದ್ವಯಂ ಸ್ಥಿರಮ್ ||” ಎಂಬಂತೆ ಈ ಬದುಕು, ಸಂಪತ್ತು, ಯೌವನ, ಮಕ್ಕಳು, ಪತ್ನಿ— ಇವಾವುವೂ ಸ್ಥಿರವಲ್ಲ. ಆದರೆ ಆಚರಿಸಿದ ಧರ್ಮ ಹಾಗೂ ಪಡೆದ ಕೀರ್ತಿಗಳೆರಡೇ ಶಾಶ್ವತ. ಅಂತಹ ಶಾಶ್ವತ ಸಂಪತ್ತನ್ನು ಯಜ್ಞಕರ್ತರಾಗಿ ಯಜಮಾನರೆನಿಸಿಕೊಂಡ ಬ್ರಾಹ್ಮಣರು ದೇವತಾನುಗ್ರಹದಿಂದ ಪಡೆದುಕೊಳ್ಳುವರು.
ಸ್ವಭಾನವೋ ವಿಪ್ರಾಃ |
(ಋಗ್ವೇದ ೧.೮೨.೨, ಸಾಮವೇದ ೪೧೫)
ಜ್ಞಾನಿಗಳೂ ತಪಸ್ವಿಗಳೂ ಪುಣ್ಯಾತ್ಮರೂ ಆದ ಬ್ರಾಹ್ಮಣರು ತಮ್ಮದಾದ ತೇಜಸ್ಸಿನಿಂದ ಪ್ರಕಾಶಿಸುವಂತಹ ತೇಜಸ್ವಿಗಳಾಗಿರುತ್ತಾರೆ.
ಭಾನವಃ ಎಂದರೆ ಸೂರ್ಯರು. ಬಾನುಃ, ಭಾನೂ, ಭಾನವಃ ಎಂಬಲ್ಲಿ ಉಕಾರಾಂತ ಪುಲ್ಲಿಂಗ ಭಾನು ಶಬ್ದದ ಪ್ರಥಮಾವಿಭಕ್ತಿಯ ಬಹುವಚನರೂಪ. “ಸ್ವಭಾನವಃ” ಎಂದರೆ ಸ್ವಯಂಪ್ರಕಾಶವುಳ್ಳವರು. ವಿಪ್ರರು ಅಂದರೆ ವೇದಾಧ್ಯಯನಸಂಪನ್ನರು. “ವೇದಾಧ್ಯಯನತೋ ವಿಪ್ರಾಃ”. ಹೀಗಾಗಿ ವೇದಾಧ್ಯಯನಸಂಪನ್ನರಾದ ಬ್ರಾಹ್ಮಣರು ತಮ್ಮದಾದ ಬ್ರಾಹ್ಮ ತೇಜಸ್ಸು-ವರ್ಚಸ್ಸುಗಳಿಂದಲೇ ಸಮಾಜದಲ್ಲಿ ಎದ್ದು ಕಾಣುತ್ತಾರೆ; ಇತರರಿಂದ ಗೌರವಿಸಲ್ಪಡುವಂತಹ ಪೂಜನೀಯರೂ, ಭೂಸುರರೂ, ಲೋಕಹಿತಕಾರಕರೂ, ಪುರದ ಹಿತವನ್ನು ಬಯಸುವ ಪುರೋಹಿತರೂ ಆಗಿರುತ್ತಾರೆ. ಹಾಗಾಗಿ, ಇಂತಹ ಬ್ರಾಹ್ಮಣ್ಯವನ್ನು ಬ್ರಾಹ್ಮಣಕುಲದಲ್ಲಿ ಜನಿಸಿದ ಪ್ರತಿಯೊಬ್ಬರೂ ಉಳಿಸಿಕೊಳ್ಳಬೇಕು; ಬೆಳೆಸಿಕೊಳ್ಳಬೇಕು. ಅದಕ್ಕಾಗಿ, ಸಂಸ್ಕೃತ, ವೇದ, ವೇದಾಂತ, ಪುರಾಣ, ಸ್ಮೃತಿಯೇ ಮೊದಲಾದ ಶಾಸ್ತ್ರಗಳನ್ನು ಅಧ್ಯಯನ ಮಾಡಬೇಕು. ಅಸಡ್ಡೆ ಮಾಡಿದರೆ ಮುಂದೆ ಇಂತಹ ಪವಿತ್ರ ದುರ್ಲಭ ಜನ್ಮವು ಸಿದ್ಧಿಸಲಾರದು. ಹಾಗಾಗಿ ಇನ್ನಾದರೂ ಜಾಗೃತರಾಗಬೇಕು.
ಸ್ವರ್ವನ್ತೋ ಯಜತಾ ಅಗ್ನಿಜಿಹ್ವಾಃ |
(ಋಗ್ವೇದ ೬.೫೦.೨)
ಬ್ರಾಹ್ಮಣರು ಆತ್ಮಶಕ್ತಿಯುಕ್ತರೂ, ಪೂಜ್ಯರೂ, ಅಗ್ನಿಸದೃಶ ನಾಲಿಗೆಯುಳ್ಳವರೂ ಆಗಿರುವರು.
ಯಜ್ಞಯಾಗಾದಿಗಳ ಯಜನ ಯಾಜನಗಳನ್ನು ಆಚರಿಸುವ ವಿಪ್ರರು, ಸ್ವರ್ಗದಲ್ಲಿನ ದೇವತೆಗಳಂತೆಯೇ ಅಗ್ನಿಯನ್ನೇ ತಮ್ಮ ನಾಲಗೆಯನ್ನಾಗಿ ಉಳ್ಳವರಾಗಿರುವರು. ಇವರ ನಾಲಗೆಯು ಷಡ್ರಸಾಸ್ವಾದವನ್ನು ಶಾಸ್ತ್ರೋಕ್ತವಾಗಿ ಮಾಡಿ ಸಂತೃಪ್ತವಾದರೆ ಯಜಮಾನನಿಗೂ ಕುಟುಂಬಕ್ಕೂ ಲೋಕಕ್ಕೂ ಬ್ರಾಹ್ಮಣಭೋಜನದ ಫಲಸ್ವರೂಪವಾಗಿ ಕ್ಷೇಮಸಿದ್ಧಿಯಾಗುವುದು. ಬ್ರಾಹ್ಮಣರ ನಾಲಗೆಯು ಅಗ್ನಿಯಂತೆಯೇ ಪಾಪದಾಹಕಗುಣವನ್ನೂ, ವರದಾಯಕಗುಣವನ್ನೂ ತನ್ನ ಶಾಪಾನುಗ್ರಹಶಕ್ತಿಯುಕ್ತವಾಗಿ ತೋರುವುದು. ಹಾಗಾಗಿ ತಪೋನಿಷ್ಠರಾದ ವಿಪ್ರರು ನುಡಿದಂತೆ ಫಲಿಸುವುದು. ಅಂತಹ ಬ್ರಾಹ್ಮಣ್ಯದ ಶಕ್ತಿಯನ್ನು ಉಳಿಸಿಕೊಳ್ಳಲು ಸದಾ ಷಟ್ಕರ್ಮಗಳಾದ ಯಜನ ಯಾಜನ ಅಧ್ಯಯನ ಅಧ್ಯಾಪನ ದಾನ ಪ್ರತಿಗ್ರಹಗಳನ್ನಾಚರಿಸಬೇಕು. ತಮ್ಮ ಮಕ್ಕಳಲ್ಲೂ ಇವುಗಳನ್ನು ಅನುಷ್ಠಾನಕ್ಕೆ ಕಡ್ಡಾಯವಾಗಿ ತರಬೇಕು.
ನ ಸ್ತೋತಾರಂ ನಿದೇ ಕರಃ |
(ಋಗ್ವೇದ ೩.೪೧.೬)
ಹೇ ಪರಮಾತ್ಮನೆ! ನೀನು ನಿನ್ನನ್ನು ಸ್ತುತಿಸುವವರನ್ನು ನಿಂದಿಸುವ ಪಾತ್ರವನ್ನು ನೀಡಬೇಡ / ಸೃಜಿಸಬೇಡ.
ಪರಮಾತ್ಮನ ಭಕ್ತರನ್ನು, ಭಜಕರನ್ನು, ಸ್ತೋತ್ರಮಾಡುವವರನ್ನು, ಉಪಾಸಕರನ್ನು ನಾನು ಎಂದೆಂದೂ ನಿಂದಿಸುವಂತೆ ಆಗದಿರಲಿ. ನನಗೆಂದೂ ಅಂತಹ ದುರ್ಬುದ್ಧಿಯು ಉಂಟಾಗದಿರಲಿ. ಹಾಗೆಯೇ, ಅಂತಹವರನ್ನು ದಯವಿಟ್ಟು ಹೇ ಪರಮಾತ್ಮನೆ! ನೀನೂ ಸಹ ಸೃಜಿಸಲೇಬೇಡ. ಅಂತಹ ಬುದ್ಧಿಯನ್ನೂ ನೀನು ಉಂಟುಮಾಡಬೇಡ. ಅಂತಹ ದುಷ್ಟಕಾರ್ಯ ನನ್ನಿಂದಾಗದಿರಲಿ. ದೈವಾಪಚಾರಕ್ಕೆ ನಾನು ಈಡಾಗದಿರಲಿ. ದೈವನಿಂದೆ ಎಲ್ಲೂ ನಡೆಯದಿರಲಿ. ದೈವಭಕ್ತರ ನಿಂದೆಯೂ ಆಗದಂತೆ ನೋಡಿಕೋ ಹೇ ಜಗದೀಶ್ವರ ವಾಸುದೇವಕೃಷ್ಣನೆ!!
ಸ್ತೋತಾ ವೋ ಅಮೃತಃ ಸ್ಯಾತ್ |
(ಋಗ್ವೇದ ೧.೩೮.೪)
ದೇವತೆಗಳ ಸ್ತುತಿಮಾಡುವವನು ಅಮರನಾಗುತ್ತಾನೆ.
ದೇವಾನುದೇವತೆಗಳ ಪೂಜೆ, ಯಜ್ಞ, ಯಾಗಾದಿಗಳನ್ನು ವೇದೋಕ್ತ-ಸ್ಮೃತ್ಯುಕ್ತವಾಗಿ ಮಾಡುವ ಅಧಿಕಾರವಿರುವುದು ಉಪನೀತನಾಗಿ ದ್ವಿಜನೆನಿಸಿ ವೇದಾಧಿಕಾರ ಪಡೆದು ವೇದಾಧ್ಯಯನ ಮಾಡಿ ವಿಪ್ರರೆನಿಸಿದವರಿಗೆ ಮಾತ್ರ. ಹಾಗಾಗಿ, ಅಂತಹ ವಿಪ್ರರು ಬ್ರಹ್ಮಜ್ಞಾನವನ್ನೂ ಪಡೆದು ನಿಜಾರ್ಥದಲ್ಲಿ ಸಾರ್ಥಕ ಬ್ರಾಹ್ಮಣರೆನಿಸಿಕೊಳ್ಳುವುದರಿಂದ, ಅವರು ದೇವಾನುದೇವತೆಗಳನ್ನು ಮಂತ್ರಪೂರ್ವಕ ಸ್ತುತಿಮಾಡುವವರಾಗಿರುವರು. “ಮಂತ್ರಂ ತು ಬ್ರಾಹ್ಮಣಾಧೀನಮ್” ಮಂತ್ರವಾದರೋ ಬ್ರಾಹ್ಮಣರ ಅಧೀನವಾಗಿರುವುದಲ್ಲವೆ? ಇತರರಿಗೆ ವೇದಮಂತ್ರೋಚ್ಚಾರಣೆಯ ಅಧಿಕಾರವಿಲ್ಲದಿರುವುದರಿಂದ, ಬ್ರಾಹ್ಮಣಕುಲಸಂಜಾತರು ಈ ಕೋಟಿಜನ್ಮದುರ್ಲಭವಾದ ಅವಕಾಶವನ್ನು ಕಳೆದುಕೊಳ್ಳದೆ, ತಮ್ಮ ಮಕ್ಕಳಿಗೆ ವೇದಾಧ್ಯಯನ ಮಾಡಿಸಬೇಕು. ಇಲ್ಲವಾದರೆ ಬ್ರಾಹ್ಮಣಜನ್ಮವೂ ವ್ಯರ್ಥ. ಮುಂದೆ ಬ್ರಾಹ್ಮಣಜನ್ಮವೂ ಬಾರದು. ವೇದೋಕ್ತದೇವತಾಸ್ತುತಿಕರ್ತೃಗಳ ಮಹಿಮೆ ಹಾಗೂ ಅದರ ಫಲವನ್ನೂ ಈ ಮಂತ್ರವು ಪ್ರಶಂಸಿಸುತ್ತಿದೆ. ಅಂಥವರು ಬ್ರಹ್ಮಜ್ಞಾನವನ್ನು ಪಡೆದು ಅಮೃತತ್ವ / ಮೋಕ್ಷವನ್ನು ಹೊಂದಿ ಅಮರರಾಗುತ್ತಾರೆಂದು ವೇದವೇ ಘೋಷಿಸುತ್ತಿದೆ.
ಮಾ ಭೂಮ ನಿಷ್ಟ್ಯಾ ಇವ |
(ಋಗ್ವೇದ ೮.೧.೧೩)
ನಾವು ಜಾತಿಬಹಿಷ್ಕೃತರಂತೆ ಆಗದಿರಲಿ.
ಬ್ರಾಹ್ಮಣರಾಗಲೀ, ಇತರರಾಗಲೀ, ಅವರವರ ಜಾತಿಧರ್ಮ, ಕುಲಧರ್ಮ, ಸಂಪ್ರದಾಯ, ಪರಂಪರೆ, ಆಚಾರ-ವಿಚಾರ, ಆರಾಧನೆ, ಕುಲದೇವತಾ ಉಪಾಸನೆ, ವರ್ಣಧರ್ಮ, ಆಶ್ರಮಧರ್ಮಗಳನ್ನು ಯಥಾಶಕ್ತಿ ಆಚರಿಸಿಕೊಂಡು, ಮುಂದುವರೆಸಿಕೊಂಡು, ತಮ್ಮ ಮುಂದಿನ ಪೀಳಿಗೆಗೆ ಕೊಟ್ಟು ನಾಶವಾಗದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ, ತಲತಲಾಂತರದಿಂತ ಬಂದ ಧರ್ಮವು ಹ್ರಾಸವಾಗಿ, ಅಧರ್ಮವು ಉಚ್ಛ್ರಾಯಕ್ಕೆ ಬಂದು, ವಂಶದ ಪತನವಾಗುತ್ತದೆ. ಕಾಲಾಂತರದಲ್ಲಿ ಸತ್ಸಂತಾನಪ್ರಾಪ್ತಿಯೂ ಆಗದೇ, ಸರ್ವನಾಶವಾಗಿಹೋಗುವುದು. ಅದಕ್ಕಾಗಿ, ಬ್ರಾಹ್ಮಣರು ತಮ್ಮ ತಮ್ಮ ಆಚಾರ್ಯಪರಂಪರೆ, ಗುರುಸಂಪ್ರದಾಯ, ವಂಶಾಚಾರ, ಕುಲಪುರೋಹಿತರ ಸೂಚನೆಗಳಿಗೆ ಅನುಸಾರ ತಮ್ಮ ದೈನಂದಿನ ನಿತ್ಯಕರ್ಮ, ನೈಮಿತ್ತಿಕ ಕರ್ಮ, ವರ್ಷಾವಧಿ ಪೂಜೆ ಪುನಸ್ಕಾರ, ಪಿತೃಕಾರ್ಯ, ತಂಬಿಲಾದಿಗಳನ್ನು ಕಾಲಕಾಲಕ್ಕೆ ಕ್ರಮದಂತೆ ಆಚರಿಸಿಕೊಂಡು, ಅನ್ನಸಂತರ್ಪಣೆಯನ್ನೂ ಮಾಡಿಕೊಂಡು ಬಂದರೆ, ಅವರ ವಂಶವೂ ಉದ್ಧಾರವಾಗುವುದು; ಆತ್ಮೋದ್ಧಾರವೂ ತನ್ಮೂಲಕ ಆಗುವುದು. ಉಪಾಸನೆಗಳಿಂದ ಚಿತ್ತಶುದ್ಧಿ, ಚಿತ್ತೈಕಾಗ್ರತೆಗಳು ಸಿದ್ಧಿಸಿ, ಬ್ರಹ್ಮಾತ್ಮೈಕ್ಯಸ್ವರೂಪಾನುಸಂಧಾನವೂ ಕಾಲಕ್ರಮೇಣ ಸಿದ್ಧಿಸಿ, ಜೀವನ್ಮುಕ್ತರಾಗುವರು.
ಒಂದು ಕುಲದಲ್ಲಿ ಒಬ್ಬ ಜೀವನ್ಮುಕ್ತನಾದರೆ ಆತನ ಹಿಂದಿನ ೭ ತಲೆಮಾರು ಹಾಗೂ ಮುಂದಿನ ೭ ತಲೆಮಾರು ಕೂಡ ಮುಕ್ತಿಯನ್ನೈದುವುದು. ಅದಕ್ಕೇ ಹೇಳುವುದು—
“ಕುಲಂ ಪವಿತ್ರಂ ಜನನೀ ಕೃತಾರ್ಥಾ
ವಸುಂಧರಾ ಪುಣ್ಯವತೀ ಚ ತೇನ |
ಅಪಾರಸಂವಿತ್ಸುಖಸಾಗರೇऽಸ್ಮಿನ್
ಲೀನಂ ಪರಬ್ರಹ್ಮಣಿ ಯಸ್ಯ ಚೇತಃ ||”
ಅಪಾರ ಜ್ಞಾನಸಾಗರವಾದ ಈ ಆತ್ಮರೂಪೀ ಪರಬ್ರಹ್ಮದಲ್ಲಿ ಯಾವನ ಚಿತ್ತವು ಸದಾ ಲೀನವಾಗಿರುವುದೋ ಅಂಥವನಿಂದ ಆತನು ಹುಟ್ಟಿದ ಕುಲವೂ ಪವಿತ್ರ, ಆತನನ್ನು ಹೆತ್ತ ತಾಯಿಯೂ ಕೃತಕೃತ್ಯಳು, ಹಾಗೂ ಆತನನ್ನು ಹೊತ್ತ ಈ ಭೂದೇವಿಯೂ ಪುಣ್ಯವತಿಯೆನಿಸುವಳು.
ಉಪನೀತನಾದ ಬ್ರಾಹ್ಮಣನು ನಿತ್ಯ ಸಂಧ್ಯಾವಂದನೆಯನ್ನು ಮಾಡತಕ್ಕದ್ದು. ಅದನ್ನು ಬಿಟ್ಟರೆ ಆತ ಜಾತಿಬಹಿಷ್ಕೃತನೇ ಆಗುವನು. ದೀರ್ಘಕಾಲ ಸಂಧ್ಯಾವಂದನೆಯನ್ನು ಬಿಟ್ಟರೆ ಅದಕ್ಕೆ ಸರ್ವಥಾ ಪ್ರಾಯಶ್ಚಿತ್ತವಿಲ್ಲ. ಅಂಥವರು ಪತಿತಬ್ರಾಹ್ಮಣರು / ಬ್ರಹ್ಮಬಂಧುಗಳು ಎನಿಸುವರೇ ಹೊರತು ಬ್ರಾಹ್ಮಣರೆನಿಸಲಾರರು. ಬೆಳಗಿನ ಸಂಧ್ಯಾವಂದನೆ ರಾತ್ರಿಯ ಪಾಪವನ್ನು ದಹಿಸಿದರೆ, ಸಂಜೆಯದು ಹಗಲಿನ ಪಾಪವನ್ನು ಪರಿಹರಿಸುವುದು. ಮಧ್ಯಾಹ್ನದ್ದು ಮಾತ್ರ ಪುಣ್ಯಪ್ರದ. “ಅಹರಹಃ ಸಂಧ್ಯಾಮುಪಾಸೀತ” ಇದು ಶಾಸ್ತ್ರಾದೇಶ. ಈಗ ನಾವು ಯಾವುದೇ ವೃತ್ತಿ ಪ್ರವೃತ್ತಿಗಳಲ್ಲಿರಲಿ, ಎಷ್ಟೇ ಬಿಡುವಿಲ್ಲದಿರಲಿ, ಆದರೆ ೨ ಹೊತ್ತಾದರೂ ಕನಿಷ್ಠ ಗಾಯತ್ರೀ ಜಪವನ್ನಾದರೂ ಮಾಡೋಣ. ಅವಕಾಶವಿದ್ದಾಗ ಪೂರ್ತಿ ಕ್ರಮದಂತೆ ಮಾಡೋಣ. ನಿತ್ಯವೂ ಆಪದ್ಧರ್ಮ ಬೇಡ. ಆಪದ್ಧರ್ಮ ಆಪತ್ಕಾಲಕ್ಕೆ ಮಾತ್ರ ಸೀಮಿತವಿರಲಿ. ನಾವೂ ಮಾಡಿ, ನಮ್ಮ ಮಕ್ಕಳಿಗೂ ನಿತ್ಯವೂ ಮಾಡಿಸೋಣ. ಆಗದೇ?
Comments
Post a Comment