ಬ್ರಾಹ್ಮಣ್ಯ ೨

ಕ್ಷತ್ರಸ್ಯ ತ್ವಾ ಪರಸ್ಪಾಯ ಬ್ರಹ್ಮಣಸ್ತನ್ವಂ ಪಾಹಿ |

(ಶುಕ್ಲಯಜುರ್ವೇದ ೩೮.೧೯)


ಕ್ಷಾತ್ರಶಕ್ತಿಯ ರಕ್ಷಣೆಗಾಗಿ ಬ್ರಾಹ್ಮಶಕ್ತಿಯ ಸ್ವರೂಪವನ್ನು ರಕ್ಷಿಸು (ಹೇ ಪರಮಾತ್ಮನೆ!). 


ಯಾಕೆಂದರೆ, ಉತ್ತಮ ಕ್ಷಾತ್ರಶಕ್ತಿಯು ಲೋಕದ ರಕ್ಷಣೆಗೆ, ಧರ್ಮರಕ್ಷಣೆಗೆ, ದುಷ್ಟಶಿಕ್ಷಣ-ಶಿಷ್ಟರಕ್ಷಣಕ್ಕೆ ಅತ್ಯಗತ್ಯ. ಹಾಗಾಗಿ, ಅಂತಹ ಕ್ಷಾತ್ರದ ರಕ್ಷಣೆ ಆಗಬೇಕಿರುವುದು ಅನಿವಾರ್ಯ. ಬ್ರಾಹ್ಮಶಕ್ತಿಯು ತನ್ನ ಮೂಲಸ್ವರೂಪವನ್ನು ಕಳೆದುಕೊಂಡರೆ ಕ್ಷಾತ್ರವೂ ಹಾಳಾಗುವುದು. ಅದಕ್ಕೋಸ್ಕರ, ಬ್ರಾಹ್ಮಶಕ್ತಿಯ ಮೂಲಸ್ವರೂಪವು ಹಾಗೆಯೇ ಸುರಕ್ಷಿತವಾಗಬೇಕು. ಆಗಲೇ ಲೋಕವು ಧರ್ಮಮಾರ್ಗದಲ್ಲಿ ಮುನ್ನಡೆಯಲು, ಲೋಕದ ಸುಭಿಕ್ಷವೂ ಸಾಧ್ಯವಾಗುವುದು. ಶುದ್ಧ ಬ್ರಾಹ್ಮಶಕ್ತಿಯೂ, ಶುದ್ಧಕ್ಷಾತ್ರತೇಜಸ್ಸೂ ಜೊತೆ ಸೇರಿದರೆ, ಲೋಕದಲ್ಲಿ ಧರ್ಮ-ಶಾಂತಿ-ನೆಮ್ಮದಿಗಳು ಸ್ಥಿರವಾಗುವುವು; ಎಂತಹ ಮಹತ್ತಾದುದನ್ನೂ ಸಾಧಿಸಬಹುದು. ಹಾಗಾಗಿ, ಬ್ರಾಹ್ಮಣ್ಯದ ರಕ್ಷಣೆ ಇದಕ್ಕೆ ಅತ್ಯಂತ ಅವಶ್ಯಕ. ಅದು ಬ್ರಾಹ್ಮಣರಿಂದಲೇ ಆಗಬೇಕಷ್ಟೆ? ಆ ಕಡೆಗೆ ಬ್ರಾಹ್ಮಣರು ಇನ್ನಾದರೂ ಹೆಚ್ಚು ಮಹತ್ತ್ವ, ಗಮನ ಕೊಡುವರೇ? “ಲೋಕಾಃ ಸಮಸ್ತಾಃ ಸುಖಿನೋ ಭವನ್ತು” ಎಂಬುದು ಸತ್ಯವಾಗಬೇಕಲ್ಲವೆ? ಬ್ರಾಹ್ಮಣರು ನಿಸ್ವಾರ್ಥಿಗಳಾಗಿ, ಸ್ವಹಿತ-ಲೌಕಿಕಾಭ್ಯುದಯವನ್ನು ಮಾತ್ರ ನೋಡದೆ, ಬ್ರಾಹ್ಮಣಧರ್ಮದ ರಕ್ಷಣೆಯ ಮೂಲಕ ಲೋಕಹಿತಕ್ಕೂ ಸ್ವಲ್ಪ ಗಮನ ಕೊಡುವಂತಾಗಲೆಂದು ಪರಮಾತ್ಮನಲ್ಲಿ ಪ್ರಾರ್ಥನೆ.


ಬ್ರಹ್ಮ ಕ್ಷತ್ರಂ ಪವತೇ |

(ಶುಕ್ಲಯಜುರ್ವೇದ ೧೯.೫)


ಬ್ರಾಹ್ಮಶಕ್ತಿಯು ಕ್ಷಾತ್ರಶಕ್ತಿಯನ್ನು ಪವಿತ್ರಗೊಳಿಸುತ್ತದೆ.


 ಶುದ್ಧವಾದ ಬ್ರಾಹ್ಮಶಕ್ತಿಯು ಕ್ಷಾತ್ರಬಲಕ್ಕೆ ಜ್ಞಾನರೂಪದಲ್ಲಿ ತಪೋರೂಪದಲ್ಲಿ ಬೆಂಬಲವಾಗಿ, ಕ್ಷಾತ್ರಸಾಮರ್ಥ್ಯಕ್ಕೆ ತಪೋಬಲವನ್ನಿತ್ತು ಅದರ ಶಕ್ತಿಯನ್ನು ಹೆಚ್ಚಿಸಿ, ಧರ್ಮರಕ್ಷಣೆಗೆ ಸಹಕರಿಸುತ್ತದೆ. ಕೇವಲ ದೇಹಬಲ ಸಾಲದು. “ಧಿಕ್, ಬಲಂ ಕ್ಷತ್ರಿಯ ಬಲಂ, ಬ್ರಹ್ಮತೇಜೋ ಬಲಂ ಬಲಮ್” ಎಂಬಂತೆ, ಬ್ರಹ್ಮತೇಜಸ್ಸು ಕ್ಷಾತ್ರಬಲದೊಂದಿಗೆ ಮೇಳೈಸಿದರೆ, ಅದನ್ನು ಲೋಕದಲ್ಲಿ ಯಾರೂ ಎದುರಿಸಿ ಗೆಲ್ಲಲಾರರು. ಹಾಗಾಗಿ, ಬ್ರಾಹ್ಮಬುದ್ಧಿತೇಜಸ್ಸುಗಳಿಗೆ ಕ್ಷತ್ರಿಯನು ಬೆಲೆಕೊಟ್ಟಾಗ, ಆತನು ಧರ್ಮವನ್ನು ರಕ್ಷಿಸಿದವನಾಗುತ್ತಾನೆ; ತನ್ಮೂಲಕ ಸರ್ವವಿಜಯಿಯಾಗುತ್ತಾನೆ. ಅದಲ್ಲದೆ ವಿರುದ್ಧವಾಗಿ ನಡೆದರೆ, ಪರಶುರಾಮ ಮಾಡಿದಂತೆ ದುಷ್ಟಕ್ಷತ್ರಿಯರ ನಿಗ್ರಹವಾಗುತ್ತದೆ, ಧರ್ಮರಕ್ಷಣೆಯಾಗುತ್ತದೆ ಪರಮಾತ್ಮನಿಂದ. ಹಾಗಾಗಿ, ಶುದ್ಧತೆಗೇ ಪ್ರಾಧಾನ್ಯತೆಯೇ ಹೊರತು ಬರಿಯ ವರ್ಣದ ಹೆಸರಿಗಲ್ಲ. “ಧರ್ಮ ಏವ ಹತೋ ಹಂತಿ, ಧರ್ಮೋ ರಕ್ಷತಿ ರಕ್ಷಿತಃ” ಎಂಬಂತೆ, ಧರ್ಮವನ್ನು ಪಾಲಿಸದಿದ್ದರೆ ಅದೂ ಆತನನ್ನು ರಕ್ಷಿಸದೆ ನಾಶಮಾಡುವುದು. ಧರ್ಮವನ್ನು ರಕ್ಷಿಸಿದವನನ್ನು ಧರ್ಮವೇ ರಕ್ಷಿಸುವುದು. ಹಾಗಾಗಿ ಬ್ರಾಹ್ಮಣಧರ್ಮವನ್ನು ಸದಾ ರಕ್ಷಿಸಿಕೊಳ್ಳಬೇಕು. ಅದರಿಂದ ಲೋಕವೇ ರಕ್ಷಿತವಾಗುವುದು.


ಬ್ರಹ್ಮಣೇ ಪಿನ್ವಸ್ಯ, ಕ್ಷತ್ರಾಯ ಪಿನ್ವಸ್ವ |

(ಶುಕ್ಲಯಜುರ್ವೇದ ೩೮.೧೪)

ಬ್ರಹ್ಮ ದೃಂಹ, ಕ್ಷತ್ರಂ ದೃಂಹ |

(ಶುಕ್ಲಯಜುರ್ವೇದ ೬.೩)


ಬ್ರಾಹ್ಮಶಕ್ತಿಯನ್ನು ಪುಷ್ಟಿಗೊಳಿಸು; ಕ್ಷಾತ್ರಬಲವನ್ನೂ ಹೆಚ್ಚುಮಾಡು. 


ಬ್ರಾಹ್ಮಬುದ್ಧಿಯೂ ಕ್ಷಾತ್ರಬಲವೂ— ಇವೆರಡೂ ಲೋಕದ ಸುಸ್ಥಿತಿಗೆ ಪೂರಕವಾಗಿರಬೇಕು. ರಾಜಗುರುವೂ, ಮಂತ್ರಿಯೂ ತಮ್ಮದಾದ ಬ್ರಾಹ್ಮಬುದ್ಧಿಶಕ್ತಿಯಿಂದ ರಾಜನಾದವನ ಕ್ಷಾತ್ರಬಲಕ್ಕೆ ರಾಜ್ಯದ ಸುಸ್ಥಿರತೆಗೆ ಬೇಕಾದ ದಿಗ್ದರ್ಶನವನ್ನು ಮಾಡಬೇಕು. ಅದನ್ನು ರಾಜನು ಅವರೊಂದಿಗೆ ಮಂತ್ರಾಲೋಚನೆ, ವಿಮರ್ಶೆ, ವಿಚಾರ ಚಿಂತನ-ಮಂಥನ ನಡೆಸಿ, ಸಾಧಕ-ಬಾಧಕಗಳನ್ನು ಚೆನ್ನಾಗಿ ವಿವೇಚಿಸಿ, ಕಾರ್ಯರೂಪಕ್ಕೆ ತರಬೇಕು. ಆಗಲೇ ರಾಜ್ಯವು ಸುಭಿಕ್ಷವೂ, ಶಾಂತಿಯುತವೂ, ರಾಮರಾಜ್ಯವೂ ಆಗುವುದು. ಆ ರಾಜನ ಕ್ಷಾತ್ರಬಲವು ಬ್ರಾಹ್ಮಬುದ್ಧಿಗನುಗುಣವಾಗಿ ವೈಶ್ಯ-ಶೂದ್ರಶಕ್ತಿಗಳನ್ನು ಸಾಮ್ರಾಜ್ಯದ ಸಮಸ್ತರ ಹಿತಕ್ಕಾಗುವಂತೆ ಸದ್ಬಳಕೆ ಮಾಡಬೇಕು. 


ಇದಕ್ಕಾಗಿ, ಹೀಗೆ ಲೋಕಹಿತವನ್ನು ಕಾಯುವುದಕ್ಕಾಗಿ, ಹೇ ಪರಮಾತ್ಮನೇ! ನೀನು ಬ್ರಾಹ್ಮಶಕ್ತಿಯನ್ನೂ ಕ್ಷಾತ್ರಶಕ್ತಿಯನ್ನೂ ಬಲಪಡಿಸು, ಹೆಚ್ಚುಮಾಡು, ದೃಢಪಡಿಸು, ಗಟ್ಟಿಗೊಳಿಸು, ಸಮರ್ಥವಾಗುವಂತೆ ಮಾಡು.


ಬ್ರಹ್ಮ ಧಾರಯ, ಕ್ಷತ್ರಂ ಧಾರಯ, ವಿಶಂ ಧಾರಯ ||

(ಶುಕ್ಲಯಜುರ್ವೇದ ೩೮.೧೪)


ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಎಂಬ ಮೂರೂ ವರ್ಣಗಳನ್ನು ರಕ್ಷಿಸು.


ಬ್ರಾಹ್ಮಣವರ್ಣವನ್ನೂ ಸಂರಕ್ಷಿಸು; ಕ್ಷತ್ರಿಯವರ್ಣದ ಸುರಕ್ಷೆಯನ್ನೂ ಮಾಡು; ವೈಶ್ಯಾದಿ ಸಮಸ್ತ ಪ್ರಜೆಗಳನ್ನೂ ಕಾಪಾಡು. ಅರ್ಥಾತ್, ವರ್ಣಾಶ್ರಮಧರ್ಮಗಳನ್ನು ಚೆನ್ನಾಗಿ ರಕ್ಷಿಸಿ, ಲೋಕವನ್ನು ಸುಸ್ಥಿತಿಯಲ್ಲಿರುವಂತೆ ನೋಡಿಕೊ ಎಂಬ ಪ್ರಾರ್ಥನೆ ಇಲ್ಲಿದೆ. ಅವರವರು ಅವರವರ ಧರ್ಮ-ಕರ್ಮಗಳನ್ನು ನಡೆಸಿಕೊಂಡು ಬಂದರಷ್ಟೇ ವಿಶ್ವಶಾಂತಿ. “ಸ್ವಧರ್ಮೇ ನಿಧನಂ ಶ್ರೇಯಃ, ಪರಧರ್ಮೋ ಭಯಾವಹಃ”— ತನ್ನ ಧರ್ಮದಲ್ಲೇ ಸತ್ತರೂ ಶ್ರೇಯಸ್ಸು, ಪರಧರ್ಮವು ಭಯ-ಹಾನಿಕರವಾದುದು. “ಸ್ವಕರ್ಮಣಾ ತಮಭ್ಯರ್ಚ್ಯ ಸಿದ್ಧಿಂ ವಿನ್ದತಿ ಮಾನವಃ”— ತನಗೆ ಶಾಸ್ತ್ರದಲ್ಲಿ ವಿಹಿತವಾದ, ವಿಧಿಸಲ್ಪಟ್ಟ ಕರ್ಮ ಯಾವುದಿದೆಯೋ ಅದನ್ನಾಚರಿಸುವ ಮೂಲಕವೇ ಪರಮಾತ್ಮನನ್ನು ಮಾನವನು ಅರ್ಚಿಸಿ ಸಿದ್ಧಿಯನ್ನು ಹೊಂದುತ್ತಾನೆ. ಇವೆರಡೂ ಗೀತಾಚಾರ್ಯನ ಉಪದೇಶಗಳೇ ಆಗಿವೆ. ಹಾಗಾಗಿ, ಆದಷ್ಟು ವರ್ಣಸಂಕರಕ್ಕೆ ಪ್ರೇರೇಪಿಸದೆ, ಕಾರಣರಾಗದೆ ಇರೋಣ. ಇದರಿಂದ ನಮಗೂ ಒಳಿತು, ಲೋಕಕ್ಕೂ ಹಿತವಾಗುವುದರಲ್ಲಿ ಸಂದೇಹವಿಲ್ಲ.


ಯತ್ರ ಬ್ರಹ್ಮ ಚ ಕ್ಷತ್ರಂ ಚ ಸಮ್ಯಞ್ಚೌ ಚರತಃ ಸಹ |

(ಶುಕ್ಲಯಜುರ್ವೇದ ೨೦.೨೫)


ಎಲ್ಲಿ ಬ್ರಾಹ್ಮಣ-ಕ್ಷತ್ರಿಯರು ಜೊತೆಸೇರಿ ಹೋಗುತ್ತಾರೋ ಆ ಸ್ಥಾನವು ಪವಿತ್ರವಾದುದು.


ಯಾವ ಸತ್ಕಾರ್ಯಕ್ಕೆ ಬ್ರಾಹ್ಮಣ-ಕ್ಷತ್ರಿಯರು ಕೈಜೋಡಿಸಿ, ಪರಸ್ಪರ ಪೂರಕರಾಗಿ ಸಹಕರಿಸಿ ಮುನ್ನುಗ್ಗುತ್ತಾರೋ ಅಂತಹ ಕಾರ್ಯವೂ ಅತ್ಯಂತ ಪವಿತ್ರವೂ ಯಶಸ್ವಿಯೂ ಆಗುವುದಲ್ಲದೆ, ಅಂತಹ ಪ್ರದೇಶವೂ ಪರಮಪಾವನ ತಪೋಭೂಮಿ ಕರ್ಮಭೂಮಿ ತ್ಯಾಗಭೂಮಿ ಪುಣ್ಯಭೂಮಿಯಾಗುವುದರಲ್ಲಿ ಎರಡು ಮಾತಿಲ್ಲ. ಇನ್ನು, ಅಂತಹ ವ್ಯಕ್ತಿಗಳೂ ಪುಣ್ಯವಂತರೂ ಹೌದು; ಪುಣ್ಯಕರ್ಮರೂ ಲೋಕಹಿತಂಕರರೂ, ಮಹಾಪುರುಷರೂ, ಮಹಾತ್ಮರೂ, ಉದಾರಚರಿತರೂ ಆಗಿರುವರು. ಹಾಗಾಗಿ, ಧರ್ಮಕಾರ್ಯಗಳಿಗೆ, ಪುಣ್ಯಕರ್ಮಗಳಿಗೆ, ಲೋಕಹಿತಕರವಾದವುಗಳಿಗೆ ಬ್ರಾಹ್ಮಣ-ಕ್ಷತ್ರಿಯರೀರ್ವರೂ ಪರಸ್ಪರ ಕೈಜೋಡಿಸಲೇಬೇಕು; ಹಿಂಜರಿಯಬಾರದು; ಹಿಂಜರಿದು ಕರ್ತವ್ಯಲೋಪವೆಸಗಿ, ಲೋಕಹಾನಿಕಾರಕರಾಗಬಾರದು. 


ಹಾಗಿದ್ದರೆ ಬ್ರಾಹ್ಮಣರಿಗೆ ಮುಖ್ಯವಾದ ಪುಣ್ಯಕಾರ್ಯಗಳಾವುವು? ವೇದವನ್ನು ಕಲಿತು ಕಲಿಸುವುದು, ತಮ್ಮ ಮಕ್ಕಳಿಗೆ ಮುಖ್ಯವಾಗಿ ತಮ್ಮ ಪರಂಪರೆಯನ್ನು ಕಲಿಸುವುದು, ಶಾಸ್ತ್ರ-ಪುರಾಣಾದಿಗಳ ಅಧ್ಯಯನ-ಅಧ್ಯಾಪನ-ಲೇಖನ ಇತ್ಯಾದಿ. ಗಾಯತ್ರ್ಯಾದಿ ನಿತ್ಯಾನುಷ್ಠಾನವನ್ನು ಪ್ತತಿನಿತ್ಯ ಬೆಳಿಗ್ಗೆ, ಮಧ್ಯಾಹ್ನ, ಸಂಜೆ ತಪ್ಪದೇ ಮಾಡುವುದು, ಮಾಡಿಸುವುದು. ಬೆಳಿಗ್ಗೆ ಮಾಡಿದ್ದು ರಾತ್ರಿಯ ಪಾಪಹರ; ಸಂಜೆ ಕೈಗೊಂಡದ್ದು ಹಗಲಿನ ಪಾಪನಿವಾರಕ; ಮಧ್ಯಾಹ್ನದ್ದು ಮಾತ್ರ ಪುಣ್ಯಪ್ರದ. ಗುರುಸಂಪ್ರದಾಯಾನುಸಾರ ಅಧ್ಯಯನ, ಅನುಷ್ಠಾನ. ಲೌಕಿಕವಿದ್ಯೆ ವ್ಯವಹಾರಗಳನ್ನು ಜೀವನಕ್ಕೆಷ್ಟು ಅನಿವಾರ್ಯವೋ ಅಷ್ಟಕ್ಕೇ ಸೀಮಿತಗೊಳಿಸಿ, ಉಳಿದ ಸಮಯವನ್ನು ಆದಷ್ಟೂ ಗೀತೆ-ಉಪನಿಷತ್-ಬ್ರಹ್ಮಸೂತ್ರ-ಪುರಾಣ-ವೇದ-ಸಂಸ್ಕೃತಗಳ ಶ್ರವಣ, ಮನನ, ನಿದಿಧ್ಯಾಸನ, ಸ್ವಾಧ್ಯಾಯ, ಪ್ರವಚನಾದಿಗಳಿಗೆ ಮೀಸಲಿಟ್ಟು ಸದುಪಯೋಗಮಾಡಿ, ಅಮೂಲ್ಯವಾದ ಈ ನರಜನ್ಮವನ್ನು, ಅದರಲ್ಲೂ ಪರಮಪವಿತ್ರವಾದ ಈ ದುರ್ಲಭ ಬ್ರಾಹ್ಮಣಜನ್ಮವನ್ನು ಸಾರ್ಥಕಪಡಿಸಿಕೊಳ್ಳೋಣ. ಆಗದೇ? ಇದರಿಂದ ನಮ್ಮ ಹಾಗೂ ಲೋಕದ ಉದ್ಧಾರವಾಗುವುದರಲ್ಲಿ ಎಳ್ಳಷ್ಟೂ ಸಂದೇಹ ಬೇಡ. ಇದು ವೇದೋಕ್ತ, ಸಕಲ ಶಾಸ್ತ್ರೋಕ್ತವಾದ ಸತ್ಯವಾದ ಅಮೃತವಾಣಿಯಾಗಿದೆ.


ತಪಸೇ ಶೂದ್ರಮ್ |

(ಶುಕ್ಲಯಜುರ್ವೇದ ೩೦.೫)


ಶಾರೀರಿಕ ಶ್ರಮಕ್ಕಾಗಿಯೇ ಶೂದ್ರನನ್ನು ಪರಮಾತ್ಮನು ಸೃಜಿಸಿದನು.


ತಪಸ್ ಎಂಬುದು ಸಕಾರಾಂತ ನಪುಂಸಕಲಿಂಗ ಶಬ್ದ. “ತಪ ತಾಪೇ ಸನ್ತಾಪೇ ದಾಹೇ ವಾ” ಧಾತುಜನ್ಯವಾದದ್ದು. ಇದರರ್ಥ— ಬಿಸಿಯಾಗಿರು, ಬಿಸಿಮಾಡು, ಉರಿ, ದಹಿಸು, ಸುಡು, ಮಾನಸಿಕ ಅಥವಾ ದೈಹಿಕ ನೋವುಗಳಿಂದ ನರಳುವಿಕೆ / ನೋವುಗಳನ್ನು ಸಹಿಸುವಿಕೆ ಅಥವಾ ಉಂಟುಮಾಡುವುದು. ಈ ಮೇಲಿನ ಅರ್ಥಗಳನ್ನು ತನ್ನ ಗುಣ-ಕರ್ಮಗಳನ್ನಾಗಿ ಉಳ್ಳವನೇ ಶೂದ್ರನು.


“ನಿದಾಘ ಉಷ್ಣೋಪಗಮ ಉಷ್ಣ ಊಷ್ಮಾಗಮಸ್ತಪಃ ” 

(ಅಮರಕೋಶ)


ಹಾಗಾಗಿ ಶ್ರಮದ ದುಡಿಮೆಯ ತಾಪದಿಂದ, ಅನುತಾಪದಿಂದ, ಪರಿತಾಪದಿಂದ, ದುಃಖದಿಂದ, ಶಾರೀರಿಕ ನೋವುಗಳಿಂದ ಶೋಕಿಸುವವನೇ ಶೂದ್ರನು. “ಪರಿಚರ್ಯಾತ್ಮಕಂ ಕರ್ಮ ಶೂದ್ರಕರ್ಮಸ್ವಭಾವಜಮ್ ”— “ಎಲ್ಲರ ಪರಿಚರ್ಯೆ / ಸೇವೆ ಮಾಡುವುದೇ ಶೂದ್ರವರ್ಣದ ಸ್ವಭಾವಜವಾದ ಕರ್ಮವೆಂದಿದ್ದಾನೆ ಗೀತಾಚಾರ್ಯ.


“ಶೋಚತೀತಿ ಶೂದ್ರಃ”— ದುಃಖಪಡುತ್ತಾನೆಂಬುದರಿಂದ ಶೂದ್ರನು. ಶುಚ ಶೋಕೇ ಧಾತು. ಹೀಗೆ, ಒಟ್ಟಿನಲ್ಲಿ ಶೂದ್ರನ ಬದುಕು ಅತ್ಯಂತ ಶ್ರಮಪೂರ್ವಕವಾದುದು. ಅಂತೆಯೇ, ದೈಹಿಕಶ್ರಮಜೀವಿಗಳನ್ನೂ ಗುಣಕರ್ಮತಃ ಶೂದ್ರರೆನ್ನಬಹುದು.


ಪ್ರೈತು ಬ್ರಹ್ಮಣಸ್ಪತಿಃ |

(ಶುಕ್ಲಯಜುರ್ವೇದ ೩೩.೮೯, ೩೭.೭)


ಶ್ರೇಷ್ಠನಾದ ಬ್ರಾಹ್ಮಣವಿದ್ವಾಂಸನು ಇಲ್ಲಿಗೆ ಬರಲಿ.


ಪ್ರ + ಏತು = ಪ್ರೈತು | ಪ್ರಕೃಷ್ಟವಾಗಿ, ಆನಂದದಿಂದ, ವರಗಳನ್ನು ಹೊತ್ತು, ಬ್ರಹ್ಮಣಸ್ಪತಿಯು ನಮ್ಮೆಡೆಗೆ ಬರಲಿ. ಬ್ರಹ್ಮವೆಂದರೆ ವೇದ, ಮಂತ್ರ, ಪವಿತ್ರವಾಣಿ. ಅವುಗಳ ಒಡೆಯನೇ ಬ್ರಹ್ಮಣಸ್ಪತಿಯು. ವೇದಗಳು, ಮಂತ್ರಗಳು ಸಾಮಾನ್ಯವಾಗಿ ಬ್ರಾಹ್ಮಣಾಧೀನ, ಬ್ರಾಹ್ಮಣರ ವಿದ್ಯೆ. ಅಲ್ಲದೆ ಬ್ರಾಹ್ಮಣರು ಸಾಮಾನ್ಯವಾಗಿ ಉತ್ತಮವಾದ, ಶ್ರೇಷ್ಠವಾದ, ಪವಿತ್ರವಾದ, ಸುಬೋಧಪ್ರದವಾದ, ಮನ ನೋಯಿಸದ, ಸರ್ವರಿಗೂ ಪ್ರಿಯವಾದ ಮಾತುಗಳನ್ನೇ ಆಡುತ್ತಾರೆ. ಹಾಗಾಗಿ ಅವರದು ಪವಿತ್ರವಾಣಿ. ಹೀಗೆ ಇವೆಲ್ಲದರ ಒಡೆಯನಾದ ಶ್ರೇಷ್ಠನಾದ, ಶ್ರೋತ್ರಿಯನೂ ಬ್ರಹ್ಮನಿಷ್ಠನೂ ಆದ ಬ್ರಾಹ್ಮಣನು ಗುರುವಾಗಿ ಬಂದು ನಮ್ಮನ್ನುದ್ಧರಿಸಲಿ ಎಂಬುದಿದರ ತಾತ್ಪರ್ಯ. 


“ವರ್ಣಾನಾಂ ಬ್ರಾಹ್ಮಣೋ ಗುರುಃ” ಎಂಬ ಮಾತಿನಂತೆ ಸಕಲಲೋಕಕ್ಕೂ ಗುರುಸ್ಥಾನೀಯರಾದ ಬ್ರಾಹ್ಮಣರು ಅದನ್ನು ಉಳಿಸಿ ಬೆಳೆಸಲು, ಕೇವಲ ತಮ್ಮ ಸಂಸಾರ, ಸಂಪತ್ತು, ಆಧುನಿಕವಿದ್ಯೆ ಮುಂತಾದವುಗಳಿಗೆ ವಶರಾಗದೆ, ವೇದಶಾಸ್ತ್ರಪುರಾಣಾದಿಗಳನ್ನು ಸ್ವತಃ ಅಧ್ಯಯನ ಮಾಡಿ, ತಮ್ಮ ಮಕ್ಕಳಿಗೂ ಕಲಿಸಿ, ಇತರ ಯೋಗ್ಯ ಶಿಷ್ಯರಿಗೂ ಬೋಧಿಸಿ, ಲೋಕದಲ್ಲಿ ಸನಾತನ ವೈದಿಕಧರ್ಮವನ್ನು ಎತ್ತಿಹಿಡಿದು, ವಿಶ್ವಶಾಂತಿಗೆ ಕಾರಣರಾಗುವಂತಾಗಲೆಂದು ಆ ಪರಮಾತ್ಮನಲ್ಲಿ ಕೇವಲ ಪ್ರಾರ್ಥಿಸದೆ, ಆ ನಿಟ್ಟಿನಲ್ಲಿ ಈಗಿಂದೀಗಲೇ ಕಾರ್ಯಪ್ರವೃತ್ತರೂ ಆಗೋಣ. ಆಗದೆ?


ಬ್ರಹ್ಮನ್ ತ್ವಂ ಬ್ರಹ್ಮಾಸಿ |

(ಶುಕ್ಲಯಜುರ್ವೇದ ೧೦.೨೮)


ಹೇ ಬ್ರಾಹ್ಮಣನೆ! ನೀನು ಸಾಕ್ಷಾತ್ ಬ್ರಹ್ಮಸ್ವರೂಪನೇ ಆಗಿರುವಿ.


ವೇದವೇ ಸಾರಿ ಹೇಳುತ್ತಿದೆ, ಉದ್ಘೋಷಿಸುತ್ತಿದೆ! ಎಲೈ ಬ್ರಾಹ್ಮಣನೆ (ಬ್ರಹ್ಮನ್)! ನೀನು (ತ್ವಂ), ಪರಬ್ರಹ್ಮಾತ್ಮನೇ ಆಗಿರುವಿಯಲ್ಲದೆ ಬೇರೆಯಲ್ಲ (ಬ್ರಹ್ಮ ಅಸಿ). ನೀನು ಪರಮಾತ್ಮನೇ ಆಗಿರುವೆ. ನೀನು ಈ ದೇಹವಲ್ಲ, ಇಂದ್ರಿಯಗಳಲ್ಲ, ಪ್ರಾಮವಲ್ಲ, ಮನಸ್ಸಲ್ಲ, ಬುದ್ಧಿಯಲ್ಲ, ಚಿತ್ತವಲ್ಲ, ಅಹಂ ಚಿದಾಭಾಸನೂ ಅಲ್ಲ. ಆದರೆ, ಇದೆಲ್ಲವನ್ನೂ ಬೆಳಗುತ್ತಿರುವ ಪ್ರತ್ಯಗಾತ್ಮನೇ ನೀನು. ಆ ಆತ್ಮನೇ ಸರ್ವರೊಳಗಿರುವ, ಹೊರಗಿರುವ, ಎಲ್ಲವೂ ತಾನೇ ಆಗಿರುವ, ಪರಮಾತ್ಮನೇ ಹೌದು. ಆತನನ್ನು ಹೊರತುಪಡಿಸಿ ಪರಮಾರ್ಥದೃಷ್ಟಿಯಿಂದ ಈ ಸೃಷ್ಟಿಯಲ್ಲಿ ಆತನಲ್ಲದ, ಆತನಿಲ್ಲದ ಯಾವೊಂದು ಕಣವೂ ಇರಲಾರದು.


 ಹಾಗಾಗಿ, ಅಯ್ಯಾ ಉಪನಯನಾದಿಸಂಸ್ಕಾರಗಳಿಂದಾದ ದ್ವಿಜನೇ! ವೇದಾಧ್ಯಯನವನ್ನು ಮಾಡಿದ ವಿಪ್ರನೇ! ಬ್ರಹ್ಮಜ್ಞಾನಿಯಾದ ಬ್ರಾಹ್ಮಣನೆ! ನೀನೇ ಅವ್ಯಕ್ತ ನಿರ್ಗುಣ ನಿರಾಕಾರ ನಿರುಪಾಧಿಕ ಬ್ರಹ್ಮದ ಪ್ರತ್ಯಕ್ಷವ್ಯಕ್ತ ಸಗುಣ ಸಾಕಾರ ಸೋಪಾಧಿಕ ಮೂರ್ತಿಯಾಗಿರುವೆ. ಹಾಗಾಗಿ, ಸೃಷ್ಟಿಯೆಲ್ಲವೂ ಬ್ರಹ್ಮವಾಗಿರುವಾಗ ಹುಟ್ಟಿ ಸಾಯುವಂತೆ ತೋರುತ್ತಿರುವ ನಿನ್ನ ದೇಹಾದಿಗಳೂ ಬ್ರಹ್ಮವಷ್ಟೆ? ಅದಕ್ಕೆ ಆಧಾರನಾದ ಚೇತನನಾದ ಮೂಲವಾದ ನೀನೂ ಬ್ರಹ್ಮವೇ ಆಗಿರುವಿ. ಬ್ರಹ್ಮವೇ ನೀನೂ ಆಗಿರುವಿ.


“ಸರ್ವಂ ಖಲ್ವಿದಂ ಬ್ರಹ್ಮ”

ಇದೆಲ್ಲವೂ ಬ್ರಹ್ಮವಷ್ಟೆ?


“ಅಯಮಾತ್ಮಾ ಬ್ರಹ್ಮ”

ಈ ಆತ್ಮನೇ ಬ್ರಹ್ಮವು.


“ಪ್ರಜ್ಞಾನಂ ಬ್ರಹ್ಮ”

ಈ ವಿಶೇಷವಾದ ಜ್ಞಾನವೇ ಬ್ರಹ್ಮವು.


“ತತ್ ತ್ವಮ್ ಅಸಿ”

ಹಾಗಾಗಿ ಅದು ನೀನೇ ಆಗಿರುವಿ / ನೀನು ಅದೇ ಆಗಿರುವಿ.


“ಅಹಂ ಬ್ರಹ್ಮ ಅಸ್ಮಿ”

ನಾನು ಬ್ರಹ್ಮವಾಗಿರುವೆನು.


“ಜೀವೋ ಬ್ರಹ್ಮೈವ ನಾಪರಃ”

ಜೀವನು (ಎಲ್ಲ ಜೀವರು)ಬ್ರಹ್ಮವೇ ಹೊರತು ಅದಕ್ಕಿಂತ ಭಿನ್ನನಲ್ಲ.


ಬ್ರಹ್ಮಾಣಸ್ತೇ ಯಶಸಃ ಸನ್ತು ಮಾನ್ಯೇ |

(ಶುಕ್ಲಯಜುರ್ವೇದ ೨೭.೨)


ಜ್ಞಾನೀ ವಿದ್ವಾಂಸರೇ ಕೀರ್ತಿವಂತರಾಗಲಿ, ಯಶೋವಂತರಾಗಲಿ; ಅನ್ಯರು ಆಗದಿರಲಿ.


ನಿಜವಾದ ಬ್ರಹ್ಮಾತ್ಮೈಕ್ಯಜ್ಞಾನಿಗಳು ಯಾರಿರುವರೋ ಅವರೇ ಕೀರ್ತಿಯನ್ನು ಹೊಂದುವಂತಾಗಲಿ. ಸುಮ್ಮನೇ ಆಡಂಬರದ ಬೂಟಾಟಿಕೆಯ ತೋರಿಕೆಯ ಪ್ರದರ್ಶನದ ಸ್ವಭಾವದವರು ಯಶಸ್ಸನ್ನು ಪಡೆಯದಿರಲಿ. ಕೆಲವರು ನಿಜವಾಗಿಯೂ ಜ್ಞಾನಿಗಳಾಗಿದ್ದರೂ, ಅವರ ಸರಳ ಸಜ್ಜನಿಕೆಯ ನಿರಾಡಂಬರ ವ್ಯಕ್ತಿತ್ವದಿಂದಾಗಿ ಅವರು ಹೆಚ್ಚು ಪ್ರಚಾರಕ್ಕೆ ಬರದಿರಬಹುದು. ಆದರೆ ಮತ್ತೆ ಹಲವರು ನಿಜವಾಗಿ ಜ್ಞಾನಿಗಳಲ್ಲದಿದ್ದರೂ ಕೇವಲ ತಮ್ಮ ಹೊರಮುಖ ನೋಟದಲ್ಲಿ ಜ್ಞಾನಿಗಳಂತೆ ವೇಷಭೂಷಣ ತೊಟ್ಟು, ಕೋಟ್ಯಂತರ ಜನರಿಗೆ ಚಿರಪರಿಚಿತರಾಗಿರಬಹುದು. ಆದರೆ, ಹೀಗಾಗಬಾರದೆಂಬುದೇ ವೇದರ್ಷಿಯ ಪ್ರಾರ್ಥನೆ. ಎಲೆಮರೆಯ ಕಾಯಿಯಂತಿದ್ದರೂ ನಿಜವಾದ ಜ್ಞಾನೀಭಕ್ತರಿಗೇ ಶ್ರೇಯಸ್ಸುಂಟಾಗಲಿ. ಕೇವಲ ಹುಸಿ ಹೊರತೋರಿಕೆಯವರಿಗೆ ವಿಶ್ವಪ್ರಸಿದ್ಧಿ ಬಾರದಿರಲಿ. ಇದರಿಂದ ಅಂಥವರಿಂದ ಲೋಕವು ಮೋಸಕ್ಕೊಳಗಾಗುವುದೂ ತಪ್ಪುವುದರಿಂದ, ಲೋಕಕಲ್ಯಾಣವಾಗುವುದು. ಹಾಗಾಗಿ ಜನತೆ ವ್ಯಕ್ತಿಯೋರ್ವನ ಕೇವಲ ಹೊರತೋರಿಕೆಗೆ ಮರುಳಾಗದೆ, ಆತನ ಅಂತಸ್ಸತ್ತ್ವವನ್ನರಿತು, ಮನ್ನಣೆ ನೀಡುವುದರಿಂದಲೇ ಲೋಕಕ್ಷೇಮವುಂಟಾದೀತು. ಅಂತಹ ನಿಜಜ್ಞಾನಿಯೂ, ಪ್ರಾಮಾಣಿಕನೂ ಆಗಿರಬೇಕು ಬ್ರಾಹ್ಮಣನಾದವನು. ಅದನ್ನು ಬ್ರಾಹ್ಮಣಕುಲದಲ್ಲಿ ಜನಿಸಿದವರೆಲ್ಲ ಸಾಧಿಸಿ, ತಮ್ಮ ಜನ್ಮವನ್ನು ಸಾರ್ಥಕಪಡಿಸಿಕೊಳ್ಳಬೇಕಲ್ಲವೆ? ಅದಕ್ಕಾಗಿ ಮಾಡಬೇಕಾದದ್ದಿಷ್ಟೇ. ನಿತ್ಯಾನುಷ್ಠಾನವನ್ನು ತಪ್ಪಿಸದೇ, ಪ್ರತಿದಿನ ಲೋಕವ್ಯವಹಾರದೊಂದಿಗೆ ಆಧ್ಯಾತ್ಮಿಕ ಸತ್ಸಂಗ, ಶ್ರವಣ, ಮನನ, ನಿದಿಧ್ಯಾಸನ, ಗೀತಾ ಉಪನಿಷತ್ ಬ್ರಹ್ಮಸೂತ್ರ ಭಾಗವತ ಶಾಂಕರಭಾಷ್ಯಾದಿಗಳ ಸ್ವಾಧ್ಯಾಯ ಪ್ರವಚನಾದಿಗಳನ್ನು ಅನುಸಂಧಾನ ಮಾಡಬೇಕು.


ಬ್ರಾಹ್ಮಣಮದ್ಯ ವಿದೇಯಮ್…ಋಷಿಮಾರ್ಷೇಯಮ್ |

(ಶುಕ್ಲಯಜುರ್ವೇದ ೭.೪೬)


ನಾನಿಂದು ಋಷಿಸದೃಶನೂ, ಆರ್ಷಪರಂಪರೆಯುಳ್ಳವನೂ ಆದ ಬ್ರಾಹ್ಮಣನಿಗೆ ವಿಶೇಷವಾಗಿ ದಾನಮಾಡಬೇಕು.


ಬ್ರಾಹ್ಮಣಸಮಾರಾಧನೆ, ಬ್ರಾಹ್ಮಣಾರ್ಚನೆ, ಬ್ರಾಹ್ಮಣರಿಗೆ ದಾನ ಇತ್ಯಾದಿ ವೈದಿಕ ವಿಧಿ ವಿಧಾನಗಳನ್ನು ಶಾಸ್ತ್ರಗಳು ಹೇಳಿವೆ. ವಿವಿಧ ಪ್ರಾಯಶ್ಚಿತ್ತಕರ್ಮಗಳ ಅಂಗವಾಗಿಯೋ, ವಿಶೇಷ ಅಭ್ಯುದಯನಿಮಿತ್ತವಾಗಿಯೋ ಇವುಗಳನ್ನು ಮಾಡುತ್ತಾರೆ. ಯಾವುದೋ ಹಿಂದಿನ ದೋಷದ ಪರಿಹಾರಾರ್ಥ ಪ್ರಾಯಶ್ಚಿತ್ತರೂಪವಾಗಿ ಅಥವಾ ವಿಶೇಷವಾದ ಅಭಿವೃದ್ಧಿಯ ಕಾಮನಾಪೂರ್ತಿಗಾಗಿ ಇಂತಹ ಭೂಸುರರ ಆರಾಧನೆಯು ಶಾಸ್ತ್ರವಿಹಿತವಾಗಿರುವುದು.


ಬ್ರಾಹ್ಮಣರಲ್ಲಿಯೂ ಜಾತಿ ಬ್ರಾಹ್ಮಣ, ಗುಣ ಬ್ರಾಹ್ಮಣ, ಕರ್ಮ ಬ್ರಾಹ್ಮಣ, ಜ್ಞಾನ ಬ್ರಾಹ್ಮಣ ಎಂದು ಹಲವು ವಿಧಗಳಿವೆ. ಬ್ರಾಹ್ಮಣರ ಕುಲದಲ್ಲಿ ಹುಟ್ಟಿದರೆ ಜಾತಿ ಬ್ರಾಹ್ಮಣ. ಬ್ರಾಹ್ಮಣವರ್ಣಕ್ಕಿರಬೇಕಾದ ಸಾಧು, ಸಜ್ಜನಿಕೆ, ದೈವಭಕ್ತಿ, ಶಾಸ್ತ್ರಾಧ್ಯಯನ, ಭಗವತ್ಸೇವೆ, ಧರ್ಮಪ್ರಸಾರ ಮುಂತಾದ ಗುಣಗಳಿದ್ದರೆ ಗುಣ ಬ್ರಾಹ್ಮಣ. ಬ್ರಾಹ್ಮಣರಿಗೆ ವಿಧಿಸಿದ ಯಜನ ಯಾಜನ ಅಧ್ಯಯನ ಅಧ್ಯಾಪನ ದಾನ ಪ್ರತಿಗ್ರಹವೆಂಬ ಷಟ್ಕರ್ಮನಿರತನಾದರೆ ಕರ್ಮ ಬ್ರಾಹ್ಮಣ. ಇನ್ನು, “ಬ್ರಹ್ಮವಿದ್ ಬ್ರಾಹ್ಮಣಃ ಸ್ಮೃತಃ” ಎಂಬಂತೆ ಬ್ರಹ್ಮವನ್ನರಿತ ಬ್ರಹ್ಮಾತ್ಮೈಕ್ಯಜ್ಞಾನನಿಷ್ಠನು ತನ್ನ ಸ್ವರೂಪಜ್ಞಾನನಿಷ್ಠೆಯಿಂದ ಜ್ಞಾನ ಬ್ರಾಹ್ಮಣನೆನಿಸುವನು.


ಇವರಲ್ಲಿ ಯಾವ ವಿಧದ ಬ್ರಾಹ್ಮಣನಿಗಾದರೂ ವಿಶೇಷವಾದ ಭಕ್ತಿಪುರಸ್ಸರ ದಾನಮಾಡಿದರೆ ಅದರ ಫಲವು ಅನಂತವಾಗುವುದು. ಅದರಲ್ಲೂ ಬ್ರಹ್ಮಜ್ಞಾನನಿಷ್ಠನೆಂದರೆ ಆತ್ಮೋದ್ಧಾರವೇ ಆಗುವ ಅವಕಾಶವಿದೆ. ಹಾಗಾಗಿ, ಇದರ ಮಹತ್ತ್ವವನ್ನರಿತು ಬ್ರಾಹ್ಮಣರು ಉತ್ತಮ ಬ್ರಾಹ್ಮಣರಾಗಲು, ಜೀವನ್ಮುಕ್ತರಾಗಲು ಪ್ರಯತ್ನಿಸಬೇಕು; ಇತರರು ಯಥಾಸಾಧ್ಯ ಬ್ರಾಹ್ಮಣರ ಸೇವೆಯನ್ನು ಮಾಡಿ ಕೃತಕೃತ್ಯರಾಗಿ ಜೀವನ್ಮುಕ್ತರಾಗಲು ಪ್ರಯತ್ನಿಸಬೇಕು. ಇದರಿಂದ ದುಃಖವು ಶಾಶ್ವತವಾಗಿ ಇನ್ನಿಲ್ಲವಾಗುತ್ತದೆ; ಎಂದಿಗೂ ಬತ್ತದ ಸುಖವುಂಟಾಗುತ್ತದೆ.



ಮರುದ್ಭ್ಯೋ ವೈಶ್ಯಮ್ |

(ಶುಕ್ಲಯಜುರ್ವೇದ ೩೦.೫)


ವ್ಯಾಪಾರಕಾರ್ಯಕ್ಕಾಗಿ ವೈಶ್ಯನನ್ನು ಭಗವಂತನು ಸೃಜಿಸಿದನು.


“ಕೃಷಿ-ಗೋರಕ್ಷ-ವಾಣಿಜ್ಯಂ ವೈಶ್ಯಕರ್ಮಸ್ವಭಾವಜಮ್” ಇದು ಗೀತಾಚಾರ್ಯೋಕ್ತಿ. ಕೃಷಿ, ಪಶುಪಾಲನೆ, ವ್ಯಾಪಾರಗಳು ವೈಶ್ಯರ ಸ್ವಭಾವಕ್ಕೆ ಸೂಕ್ತವಾದ ಕರ್ಮಗಳಾಗಿವೆ. ಹಾಗಾಗಿ, ಬ್ರಾಹ್ಮಣನಾದವನು ತನ್ನ ಸ್ವಭಾವಕ್ಕೆ ತಕ್ಕುದಾದ ಷಟ್ಕರ್ಮಗಳನ್ನೂ, ನಿತ್ಯನೈಮಿತ್ತಿಕಾದಿ ಶಾಸ್ತ್ರೋಕ್ತ ಕರ್ಮಗಳನ್ನೂ ತಪ್ಪದೇ ಕಾಲಕಾಲಕ್ಕೆ ಅನುಷ್ಠಾನಿಸಬೇಕು. ತರುವಾಯ, ಅವಕಾಶ-ಸಾಮರ್ಥ್ಯಾದಿಗಳಿದ್ದರೆ ಉಳಿದ ವರ್ಣಗಳ ಕರ್ಮಗಳಾದ ರಕ್ಷಣೆ, ಕೃಷಿ-ಗೋಪಾಲನೆ-ವ್ಯಾಪಾರ, ಸೇವೆಗಳನ್ನು ಮಾಡಬಹುದೇ ಹೊರತು ಆತನಿಗೆ ಅನಿವಾರ್ಯವಲ್ಲ. “ಸ್ವಧರ್ಮೇ ನಿಧನಂ ಶ್ರೇಯಃ ಪರಧರ್ಮೋ ಭಯಾವಹಃ” ಎಂಬ ಗೀತಾಮೃತದಂತೆ ತನ್ನ ಧರ್ಮವನ್ನು ಪಾಲಿಸದೇ ಪರಧರ್ಮವನ್ನಾಚರಿಸುವುದು ಖಂಡಿತ ಶ್ರೇಯಸ್ಕರವಲ್ಲ. ಇದನ್ನರಿತು ಪ್ರತಿಯೊಬ್ಬರೂ ತಮ್ಮ ಪೂರ್ವಸಂಸ್ಕಾರದ ಬಲದಿಂದ ದೊರೆತ ಜನ್ಮಗತ ಜಾತಿಗೆ ಹಾಗೂ ಗುಣಕ್ಕನುಗುಣವಾದ ಶಾಸ್ತ್ರವಿಹಿತ ಕರ್ಮಗಳನ್ನೇ ಆಚರಿಸಬೇಕು. ಇದರಿಂದಲೇ ಆತ್ಮೋದ್ಧಾರ; ಇದಕ್ಕೆ ವಿರುದ್ಧವಾಗಿ ನಡೆದರೆ ಮೇಲ್ನೋಟಕ್ಕೆ ಕ್ಷಣಿಕವಾದ ಲೌಕಿಕ ಪ್ರಗತಿಯಾಗಲೂ ಬಹುದು; ಆದರೆ, ಆಧ್ಯಾತ್ಮಿಕ ಅಧಃಪತನ ಖಚಿತ. ಇದು ಎಲ್ಲ ಜಾತಿ-ವರ್ಣಗಳವರಿಗೂ ಅನ್ವಯಿಸುತ್ತದೆ.


ವಿಪ್ರಾ ಅಮೃತಾ ಋತಜಾಃ |

(ಶುಕ್ಲಯಜುರ್ವೇದ ೯.೧೮, ೨೧.೧೧)


ವಿಪ್ರರು ಅಮರರೂ, ಸತ್ಯವ್ರತರೂ ಆಗಿರುವರು.


“ಜನ್ಮನಾ ಜಾಯತೇ ಜನ್ತುಃ, ಕರ್ಮಣಾ ಜಾಯತೇ ದ್ವಿಜಃ | ವೇದಾಧ್ಯಯನತೋ ವಿಪ್ರೋ ಬ್ರಹ್ಮವಿದ್ ಬ್ರಾಹ್ಮಣಃ ಸ್ಮೃತಃ ||” ಎಂಬಲ್ಲಿ ಜನ್ಮತಃ ಕೇವಲ ಜೀವನಾಗಿ, ಉಪನೀತನಾಗಿ ದ್ವಿಜನಾದವನು, ವೇದಾಧ್ಯಯನದಿಂದ ವಿಪ್ರನಾಗಿ, ಬ್ರಹ್ಮವನ್ನರಿತು ಬ್ರಾಹ್ಮಣನಾಗುವನು ಎಂದಿದೆ. ಹೀಗೆ, ವೇದಾಧ್ಯಯನದಿಂದ ವಿಪ್ರರೆನಿಸಿದವರು ಮೃತರಾಗದೆ ಅಮೃತತ್ವವನ್ನು ಪಡೆದ ಬ್ರಹ್ಮಾತ್ಮಸ್ವರೂಪರು. ಅವರ ಶರೀರವು ಸಾಯುತ್ತದೆ. ಆದರೆ ಅವರು ಶರೀರಗಳಲ್ಲ. ಅವರು ಸಾಕ್ಷಾತ್ ಬ್ರಹ್ಮವಾದ ಆತ್ಮರೇ ಆಗಿರುವರು. ಅಂತಹ ಆತ್ಮ / ಬ್ರಹ್ಮವು ಅಜ (ಜನ್ಮರಹಿತ), ಅಜರ (ಜರಾವ್ಯಾಧಿರಹಿತ), ಅಮರ (ಮರಣರಹಿತ). ಹೀಗಾಗಿ “ವಿಪ್ರಾಃ, ಅಮೃತಾಃ…”.


ಇನ್ನು, “ಋತಜಾಃ”. ಋತವೆಂದರೆ ಸತ್ಯದ ಆಂತರಿಕ ಮಾನಸಿಕಸಂಕಲ್ಪರೂಪ. ಸತ್ಯವೆಂದರೆ ಸತ್ಯದ ಹೊರಗಿನ ಆಚರಣೆ / ಕ್ರಿಯಾರೂಪ. ಹೀಗಾಗಿ, ವಿಪ್ರರು ಮನಸ್ಸಿನಲ್ಲೂ ಸುಳ್ಳನ್ನೆಣಿಸದವರು. ಋತದಲ್ಲೇ ಸದಾ ಜಾಗೃತರಾಗಿರುವವರು, ಋತದಿಂದಲೇ ಜನಿಸಿದ / ಆವಿರ್ಭವಿಸಿದ ಋತದ ಸಾಕಾರಮೂರ್ತಿಗಳೇ ಋತಜರು. 


ಇಂತಹ ಪ್ರಶಂಸೆಯನ್ನು ವೇದವೇ ಮಾಡುತ್ತಿದೆ. ಇದನ್ನು ಉಳಿಸಿ, ಇನ್ನಷ್ಟು ಬೆಳೆಸಿಕೊಳ್ಳುವತ್ತ ನಾವು ಮನಮಾಡಬೇಡವೇ? ಇದಕ್ಕಾಗಿ, ಕೇವಲ ಜಾತಿಯಿಂದ (ಹುಟ್ಟಿನಿಂದ) ಬ್ರಾಹ್ಮಣರೆನಿಸಿದವರು ವೇದಾಧ್ಯಯನದಿಂದ (ವೇದವಿದ್ಯೆಯಿಂದ) ವಿಪ್ರರೆನಿಸಬೇಕು. ಅದಕ್ಕಾಗಿ ನಾವು ವೇದಾಧ್ಯಯನ ಮಾಡಬೇಕು, ಮಕ್ಕಳಿಗೂ ಮಾಡಿಸಬೇಕು. ಯಾಕೆಂದರೆ, ವೇದಗಳನ್ನುಳಿಸಿ ಯಥಾವತ್ತಾಗಿ ನಿರ್ದೋಷವಾಗಿ ಸಂರಕ್ಷಿಸುವ ಹಾಗೂ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ, ತನ್ಮೂಲಕ ಲೋಕಕಲ್ಯಾಣವನ್ನು ಮಾಡುವ ಗುರುತರ ಜವಾಬ್ದಾರಿ ಬ್ರಾಹ್ಮಣರ ಮೇಲಿದೆ. ಉಳಿದವರಾರೂ ಇದಕ್ಕೆ ಅಧಿಕಾರಿಗಳಲ್ಲ. ಹಾಗಾಗಿ ಬ್ರಾಹ್ಮಣರೇ ಮಾಡದಿದ್ದರೆ ಮತ್ತೆ ಯಾರು ತಾನೇ ಮಾಡಲು ಸಾಧ್ಯ? ಹಾಗಾಗಿ, ಭಗವಂತನು ಅನೇಕ ಜನ್ಮಗಳ ಪೂರ್ವಸುಕೃತದ ಫಲವಾಗಿ ನಮಗಿತ್ತ ಈ ಪರಮಪವಿತ್ರವಾದ ಬ್ರಾಹ್ಮಣತನುವನ್ನು ಸಾರ್ಥಕಪಡಿಸಿಕೊಂಡು ಲೋಕೋಪಕಾರಿಗಳಾಗೋಣ. ಆತ್ಮೋದ್ಧಾರದ ದೊಡ್ಡ ಅವಕಾಶವನ್ನು ಕಳೆದುಕೊಳ್ಳದೇ ಇರಲು ಸರ್ವಥಾ ಪ್ರಯತ್ನಿಸೋಣ. ಆಗದೇ?


ವಿಪ್ರೋ ಬಭೂವ ಸಪ್ರಥಾಃ |

(ಶುಕ್ಲಯಜುರ್ವೇದ ೩೮.೧೭)


ವಿಪ್ರನು ಯಶಸ್ವಿಯಾದನು; ಕೀರ್ತಿವಂತನಾದನು.


ವೇದಾಧ್ಯಯನನಿರತನಾದ ವಿಪ್ರನು ಶ್ರೇಯೋವಂತನಾಗುತ್ತಾನೆ, ಅವನ ವಿದ್ಯಾ ಜ್ಞಾನ ತಪೋಬಲ ತೇಜಸ್ಸು ಧೀಶಕ್ತಿ ದೈವೀಚರಿತೆಗಳ ಕೀರ್ತಿ ವಿಸ್ತಾರವಾಗಿ ಪಸರಿಸುತ್ತದೆ. ಇದು ವಿಪ್ರನಾದವನ ನಿತ್ಯ  ವೇದಾಧ್ಯಯನದ, ನಿತ್ಯಾನುಷ್ಠಾನದ, ಲೋಕಕಲ್ಯಾಣಕಾರಕ ಕರ್ಮಗಳ, ಉದಾರ ವಿಶಾಲ ಮನೋಭಾವದ, ಸಮಷ್ಟಿಹಿತವನ್ನು ಬಯಸುವ ಮನಸ್ಥಿತಿಯ, “ತನ್ನಂತೆ ಪರರ ಬಗೆ” ಯುವಿಕೆಯ, ಸಂಕುಚಿತತೆ ಇಲ್ಲದಿರುವಿಕೆಯ, ವಿಶ್ವಪ್ರೇಮದ, ಧರ್ಮರಕ್ಷಣೆಯ ತೀವ್ರ ಹಂಬಲದ, ಮೌಲ್ಯಗಳ ಪುನಃಸ್ಥಾಪನೆಯ ತುಡಿತದ ದ್ಯೋತಕವಾಗಿರುವುದು. ಅಂತಹ ಮನಸ್ಥಿತಿ ವಿಪ್ರರಾದವರೆಲ್ಲರಲ್ಲೂ ಸದಾ ಜಾಗೃತವಾಗಿದ್ದು, ಅರಿಷಡ್ವರ್ಗ-ಮಾಯಾಮೋಹಗಳ ಬಂಧನಕ್ಕೊಳಗಾಗದೆ, ಸದಾ ವೈದಿಕಮಾರ್ಗದ ಮೂಲಕ ಲೋಕಹಿತವನ್ನು ಕಾಯುತ್ತಿರುವಂತಾಗಲಿ. ಇದಕ್ಕೆ ಎಲ್ಲ ಬ್ರಾಹ್ಮಣಕುಲಸಂಜಾತರೂ ಕೈಜೋಡಿಸುವಂತಾಗಲಿ. ಆ ನಿಟ್ಟಿನಲ್ಲಿ ನಮ್ಮೆಲ್ಲರ ಕಾಣ್ಕೆ-ಕಾಣಿಕೆಗಳೂ ಕೂಡಿ ಬರಲೆಂದು ಸರ್ವಾಂತರನಾದ ಪರಮಾತ್ಮನಲ್ಲಿ ಈ ಮೂಲಕ ಸಜ್ಜನ ವಿದ್ವಜ್ಜನರ ಸಮಷ್ಟಿ ಪ್ರಾರ್ಥನೆ.



Comments

Popular posts from this blog

ಸಂಸ್ಕೃತಶಬ್ದವ್ಯುತ್ಪತ್ತಿ-ಪರ್ಯಾಯಪದ-ಕೋಶಃ (ಸಂಸ್ಕೃತ-ಸಂಸ್ಕೃತ-ಕನ್ನಡ)

ಬ್ರಾಹ್ಮಣ್ಯ ೫

ಶ್ರೀನಾರಾಯಣಶತಕಮ್