ಬ್ರಾಹ್ಮಣ್ಯ ೩

ಕೃಷ್ಣಯಜುರ್ವೇದದಲ್ಲಿ ಬ್ರಾಹ್ಮಣ್ಯ


…ಅಗ್ನಿರ್ವ್ರತಪತಿರ್ಬ್ರಾಹ್ಮಣೋ ವ್ರತಭೃತ್…

(ತೈ.ಕೃ.ಯಜು.೧.೬.೭)


ಅಗ್ನಿಯು ವ್ರತಪತಿಯು. ಬ್ರಾಹ್ಮಣನು ಯಜಮಾನನೂ, ವ್ರತಧಾರಿಯೂ ಆಗಿರುವನು.


ಆಗ್ನೇಯೋ ವೈ ಬ್ರಾಹ್ಮಣಃ ಸ ಸೋಮಂ ಪಿಬತಿ

(ತೈ.ಕೃ.ಯಜು.೨.೩.೩)


ಬ್ರಾಹ್ಮಣನು (ಬ್ರಾಹ್ಮಣನೂ, ಅಗ್ನಿಯೂ ಬ್ರಹ್ಮನ ಮುಖದಿಂದಲೇ ಹುಟ್ಟಿದ್ದರಿಂದ) ಅಗ್ನಿದೇವತಾಸಂಬಂಧಿಯಷ್ಟೆ. ಅವನು ಸೋಮಪಾನವನ್ನು ಮಾಡುತ್ತಾನೆ. (ಇದರಿಂದ ಸೋಮಸಂಬಂಧಿಯೂ ಆಗುತ್ತಾನೆ).  


…ಯದಗ್ನಿರ್ಬ್ರಾಹ್ಮಣೇತ್ಯಾಹ ಬ್ರಾಹ್ಮಣೋ ಹ್ಯೇಷ ಭಾರತೇತ್ಯಾಹ…

(ತೈ.ಕೃ.ಯಜು.೨.೫.೯)


(ಯದ್+ಅಗ್ನಿಃ) ಯಾವ ಅಗ್ನಿಯಿರುವನೋ ಆತನು ಬ್ರಹ್ಮನ / ದೇವತೆಗಳ ಮುಖವಾದ್ದರಿಂದಲೂ (“ಅಗ್ನಿಮುಖಾ ವೈ ದೇವಾಃ”, “ಬ್ರಾಹ್ಮಣೋ ಅಸ್ಯ ಮುಖಮಾಸೀತ್”), ಬ್ರಾಹ್ಮಣನು ವಿರಾಟ್ಪುರುಷನ ಮುಖವಾದ್ದರಿಂದಲೂ, ವಿರಾಟ್ಪುರುಷನ ಮುಖದಿಂದ ಬ್ರಾಹ್ಮಣರು ಹುಟ್ಟಿದ್ದರಿಂದಲೂ, ಅಗ್ನಿಯು ಬ್ರಹ್ಮನ ಮುಖದಿಂದ ಹುಟ್ಟಿದ್ದರಿಂದಲೂ, ಜಾತವೇದನಾದ ಅಗ್ನಿಯು (ಬ್ರಾಹ್ಮಣ ಇತಿ ಆಹ) ಬ್ರಾಹ್ಮಣನೆಂದು (ಬ್ರಾಹ್ಮಣಾಭಿಮಾನಿ / ಬ್ರಾಹ್ಮಣಜಾತಿಯವನೆಂದು) ಬಲ್ಲವರು ಹೇಳುವರು. ಆತನು ಬ್ರಾಹ್ಮಣನೊಡನೆಯೇ ಜನಿಸಿದವನು. (ಬ್ರಾಹ್ಮಣೋ ಹಿ ಏಷಃ) ಇಂತಹ ಬ್ರಾಹ್ಮಣನಾದ ಈ ಅಗ್ನಿಯು, ಹವಿಸ್ಸನ್ನು ಭರಿಸುವುದರಿಂದ (ತುಂಬಿಕೊಳ್ಳುವುದರಿಂದ) (ಭಾರತ ಇತಿ ಆಹ) ಭಾರತನೆನಿಸಿರುವನೆಂದು ತಿಳಿದವರು ಹೇಳುವರು.


ಗಾಯತ್ರೀ ಬ್ರಹ್ಮವರ್ಚಸಮ್

(ತೈ.ಕೃ.ಯಜು.೨.೫.೧೦)


ಉಪನಯನದಲ್ಲಿ ಉಪದೇಶಿಸುವ ಗಾಯತ್ರಿಯು ಬ್ರಹ್ಮವರ್ಚಸದ ಸಾಧನವಾಗಿದೆ.


ನಿವೀತಂ ಮನುಷ್ಯಾಣಾಂ ಪ್ರಾಚೀನಾವೀತಂ ಪಿತೃಣಾಮುಪವೀತಂ ದೇವಾನಾಮ್

(ತೈ.ಕೃ.ಯಜು.೨.೫.೧೧)


ಮನುಷ್ಯರಿಗೆ ಸಂಬಂಧಿಸಿದ ಋಷಿತರ್ಪಣಾದಿಕರ್ಮಗಳಿಗೆ ನಿವೀತವನ್ನು (ಉಪವೀತ / ಯಜ್ಞೋಪವೀತ / ಜನಿವಾರ ಹಾಗೂ ಶಾಲು / ಮೇಲುಹೊದಿಕೆಯನ್ನು ಮಾಲೆಯಂತೆ) ಹಾಕಿಕೊಳ್ಳುವುದು ಪ್ರಶಸ್ತ. ಪಿತೃಕಾರ್ಯಗಳಿಗೆ ಪ್ರಾಚೀನಾವೀತವೂ (ಉಪವೀತವನ್ನು ಬಲಭುಜದಿಂದ ಹೊಟ್ಟೆಯ ಎಡಭಾಗದ ಕಡೆಗೆ ಹಾಕಿಕೊಳ್ಳುವುದೂ), ದೇವತಾಕಾರ್ಯಗಳಾದ ವ್ರತ-ಪೂಜೆ-ಹೋಮಾದಿಗಳಿಗೆ ಉಪವೀತವೂ (ಎಡಭುಜದಿಂದ ಹೊಟ್ಟೆಯ ಬಲಬದಿಗೆ ಹಾಕಿಕೊಳ್ಳುವುದೂ) ಶ್ರೇಷ್ಠವಾದುದೂ, ದೇವತಾಲಕ್ಷಣವನ್ನುಂಟುಮಾಡುವುದೂ ಆಗಿದೆ.


ಬ್ರಾಹ್ಮಣಾಯಾಧಿ ಬ್ರೂಯಾತ್

(ತೈ.ಕೃ.ಯಜು.೨.೫.೧೧)


ಆಧಿಕ್ಯ / ಹೆಚ್ಚುಗಾರಿಕೆ / ಶ್ರೇಷ್ಠತೆಯ ವಿಷಯದಲ್ಲಿ ಬ್ರಾಹ್ಮಣನೂ ಬ್ರಾಹ್ಮಣೇತರನೂ ವಿವಾದ ಮಾಡುತ್ತಾ, ತಿಳಿದ ಬ್ರಾಹ್ಮಣನ ಬಳಿಸಾರಿದರೆ, ಬ್ರಾಹ್ಮಣನಿಗೇ ಆಧಿಕ್ಯವನ್ನು ಹೇಳಬೇಕು.


ಬ್ರಾಹ್ಮಣೋ ನ ಪರೋಚ್ಯಃ

(ತೈ.ಕೃ.ಯಜು.೨.೫.೧೧)


ಬ್ರಾಹ್ಮಣನನ್ನು ಕೀಳುಮಾಡಬಾರದು.


ಗಾಯತ್ರೀ ಪುರೋನುವಾಕ್ಯಾ ಭವತಿ ತ್ರಿಷ್ಟುಗ್ಯಾಜ್ಯಾ ಬ್ರಹ್ಮನ್ನೇವ ಕ್ಷತ್ರಮನ್ವಾರಂಭಯತಿ 

ತಸ್ಮಾದ್ಬ್ರಾಹ್ಮಣೋ ಮುಖ್ಯೋ ಮುಖ್ಯೋ ಭವತಿ ಯ ಏವಂ ವೇದ

(ತೈ.ಕೃ.ಯಜು.೨.೬.೨)


(ಯಜ್ಞದಲ್ಲಿ) ಪುರೋನುವಾಕ್ಯೆಯು ಸಾಮಾನ್ಯವಾಗಿ ಗಾಯತ್ರೀ ಛಂದಸ್ಸಿನಲ್ಲಿರಬೇಕು. ಯಾಜ್ಯಾನುವಾಕ್ಯೆಯು ತ್ರಿಷ್ಟುಪ್ ಛಂದಸ್ಸಿನಲ್ಲಿರಬೇಕು.  ಅದರಿಂದ ಕ್ಷತ್ರವು ಬ್ರಾಹ್ಮಣ್ಯವನ್ನು ಅನುಸರಿಸಿ ನಡೆದಂತಾಗುತ್ತದೆ. ಆದುದರಿಂದ ಬ್ರಾಹ್ಮಣನು ಮುಖ್ಯನಾಗಿದ್ದಾನೆ. ಯಾವನು ಹೀಗೆ ತಿಳಿದಿರುತ್ತಾನೆಯೋ ಅವನು ಮುಖ್ಯನಾಗುತ್ತಾನೆ.


ಗಾಯತ್ರೀ, ತ್ರಿಷ್ಟುಪ್, ಜಗತೀ ಛಂದಸ್ಸುಗಳ ಮಂತ್ರಗಳನ್ನು ಅನುಕ್ರಮವಾಗಿ ಬ್ರಾಹ್ಮಣ, ಕ್ಷತ್ರಿಯ ಹಾಗೂ ವೈಶ್ಯ ವರ್ಣಗಳಿಗೆ ವಿಶೇಷವಾಗಿ ಬ್ರಹ್ಮೋಪದೇಶ / ಉಪನಯನ ಸಂಸ್ಕಾರಕ್ಕೆ ಬಳಸಬೇಕೆಂಬ ವೇದೋಕ್ತ ವಿಧಿಯಿದೆ.


 “ಗಾಯತ್ರ್ಯಾ ಬ್ರಾಹ್ಮಣಮುಪನಯೀತ | ತ್ರಿಷ್ಟುಭಾ ಕ್ಷತ್ರಿಯಮ್ | ಜಗತ್ಯಾ ವೈಶ್ಯಮ್ ||”


 ಗಾಯತ್ರೀಚ್ಛಂದಸ್ಸಿನ ಮಂತ್ರದಿಂದ ಬ್ರಾಹ್ಮಣನ ಉಪನಯನವನ್ನೂ, ತ್ರಿಷ್ಟುಪ್ ಛಂದಸ್ಸಿನ ಮಂತ್ರದಿಂದ ಕ್ಷತ್ರಿಯನನ್ನೂ, ಜಗತೀ ಛಂದಸ್ಸಿನ ಮಂತ್ರದಿಂದ ವೈಶ್ಯನನ್ನೂ ಉಪನಯನ ಮಾಡಬೇಕು.


 “ಗಾಯತ್ರೀಂ ಬ್ರಾಹ್ಮಣಸ್ಯ ಅನುಬ್ರೂಯಾತ್ | ಗಾಯತ್ರೋ ವೈ ಬ್ರಾಹ್ಮಣಃ | ತೇಜೋ ವೈ ಬ್ರಹ್ಮವರ್ಚಸಂ ಗಾಯತ್ರೀ | ತೇಜಸೈವೈನಂ ತದ್ಬ್ರಹ್ಮವರ್ಚಸೇನ ಸಮರ್ದ್ಧಯತಿ |” 

(ಋಗ್ವೇದೀಯ ಐತರೇಯಬ್ರಾಹ್ಮಣ ೫.೨) 


(೮ ಅಕ್ಷರಗಳ ೩ ಪಾದಗಳ ಒಟ್ಟು ೨೪ ಅಕ್ಷರಗಳುಳ್ಳ) ಗಾಯತ್ರೀಮಂತ್ರವನ್ನು ಬ್ರಾಹ್ಮಣವಟುವಿಗೆ ಬ್ರಹ್ಮೋಪದೇಶಮುಹೂರ್ತದಲ್ಲಿ ಉಪದೇಶಿಸಬೇಕು. ಯಾಕೆಂದರೆ ಗಾಯತ್ರೀಛಂದಸ್ಸೂ ಬ್ರಾಹ್ಮಣನೂ ಇವರೀರ್ವರೂ ಪ್ರಜಾಪತಿಯ ಮುಖದಿಂದ ಒಟ್ಟಿಗೇ ಉದ್ಭವಿಸಿದ್ದರಿಂದ ಪರಸ್ಪರ ಸಂಬಂಧಿಗಳು. ಹಾಗಾಗಿ, ಗಾಯತ್ರವೇ ಬ್ರಾಹ್ಮಣವು / ಬ್ರಾಹ್ಮಣನೇ ಗಾಯತ್ರನು. ಬ್ರಹ್ಮವರ್ಚಸ್ಸಿನ ತೇಜಸ್ಸೇ ಗಾಯತ್ರಿಯು. ಆ ಬ್ರಹ್ಮವರ್ಚಸ್ಸಿನ ತೇಜಸ್ಸಿನಿಂದಲೇ ಆ ಬ್ರಾಹ್ಮಣನನ್ನು ಗಾಯತ್ರಿಯು ನಿತ್ಯಾನುಷ್ಠಾನ ಮಾಡಿದರೆ ಉದ್ಧರಿಸುತ್ತದೆ / ಬ್ರಾಹ್ಮಣ್ಯವನ್ನು ಉಂಟುಮಾಡಿ ಹೆಚ್ಚಿಸುತ್ತದೆ. ತೇಜಸ್ಸೆಂದರೆ ಅಗ್ನಿಯೆಂದೂ ಅರ್ಥವಿದೆ. ಬ್ರಾಹ್ಮಣನಿಗೆ ಅಗ್ನಿಯೇ ನಿತ್ಯೋಪಾಸ್ಯದೇವತೆ. 


ಅಗ್ನಿರ್ದೇವೋ ದ್ವಿಜಾತೀನಾಂ ಮುನೀನಾಂ ಹೃದಿ ದೈವತಮ್ |

ಪ್ರತಿಮಾಸ್ವಲ್ಪಬುದ್ಧೀನಾಂ ಸರ್ವತ್ರ ಸಮದರ್ಶಿನಾಮ್ ||


 ದ್ವಿಜರಿಗೆ ಅಗ್ನಿಯೇ ದೇವರು, ನಿತ್ಯಾಗ್ನಿಹೋತ್ರವು ಅನುಷ್ಠೇಯವು. ಮುನಿಗಳಿಗೆ ದೇವನು ಅವರ ಹೃದಯದಲ್ಲೇ ಧ್ಯಾನಗಮ್ಯನಾಗಿರುವನು. ಅಲ್ಪಬುದ್ಧಿಯುಳ್ಳ, ಆತ್ಮವಿದ್ಯಾವಿಷಯದಲ್ಲಿ ಅಜ್ಞಾನಿಗಳಿಗೆ ದೇವತಾ ವಿಗ್ರಹಾದಿಗಳಲ್ಲೇ ದೇವರಿರುತ್ತಾನೆ. ಸಮದರ್ಶಿಗಳಾದ ಜ್ಞಾನಿಗಳಿಗಾದರೋ ದೇವನು ಎಲ್ಲೆಲ್ಲೂ ಇರುವನು. "ಸರ್ವಂ ಖಲ್ವಿದಂ ಬ್ರಹ್ಮ".


ಇನ್ನು, 


“ತ್ರಿಷ್ಟುಭಂ ರಾಜನ್ಯಸ್ಯ ಅನುಬ್ರೂಯಾತ್ | ತ್ರೈಷ್ಟುಭೋ ವೈ ರಾಜನ್ಯಃ | ಓಜೋ ವಾ ಇಂದ್ರಿಯಂ ವೀರ್ಯಂ ತ್ರಿಷ್ಟುಪ್ | ಓಜಸೈವೈನಂ ತದಿಂದ್ರಿಯೇಣ ವೀರ್ಯೇಣ ಸಮರ್ದ್ಧಯತಿ |” (ಐ.ಬ್ರಾ.೫.೨) 


ಕ್ಷತ್ರಿಯನಿಗೆ / ರಾಜವಂಶೀಯರಿಗೆ (೧೧ ಅಕ್ಷರಗಳ ೪ ಪಾದಗಳುಳ್ಳ ಒಟ್ಟು ೪೪ ಅಕ್ಷರಗಳ) ತ್ರಿಷ್ಟುಪ್ ಛಂದಸ್ಸಿನ ಮಂತ್ರವನ್ನು ಉಪನಯನಸಂಸ್ಕಾರದಲ್ಲಿ ಉಪದೇಶಿಸಬೇಕು. ಯಾಕೆಂದರೆ, ರಾಜರೂ ತ್ರಿಷ್ಟುಪ್ ಛಂದಸ್ಸೂ ಜೊತೆಜೊತೆಗೇ ಪ್ರಜಾಪತಿಯ ಬಾಹುಗಳಿಂದ ಸೃಷ್ಟಿಯಾದರು. ಹಾಗಾಗಿ ಅವರೀರ್ವರೂ ಪರಸ್ಪರ ಸಂಬಂಧಿಗಳು. ಹಾಗಾಗಿ ತ್ರೈಷ್ಟುಭವೇ ಕ್ಷತ್ರಿಯವು / ಕ್ಷತ್ರಿಯನೇ ತ್ರೈಷ್ಟುಭನು. ಕ್ಷತ್ರಿಯರ ಬಾಹುಪ್ರಧಾನವುಳ್ಳ ಇಂದ್ರಿಯಗಳ ವೀರ್ಯ ಪರಾಕ್ರಮಗಳೆಂಬ ಓಜಸ್ಸೇ ತ್ರಿಷ್ಟುಪ್. ಅಂತಹ ತ್ರಿಷ್ಟುಪ್ ಮಂತ್ರಾನುಷ್ಠಾನವು ಇಂದ್ರಿಯ ವೀರ್ಯ ಶೌರ್ಯ ಪರಾಕ್ರಮಗಳನ್ನು ಓಜಸ್ಸಿನಿಂದಲೇ ಹೆಚ್ಚುಮಾಡುತ್ತದೆ. ಸಾಮರ್ಥ್ಯವನ್ನು / ಸಮರ್ಥತೆಯನ್ನು ವರ್ಧಿಸುತ್ತದೆ. ಕ್ಷತ್ರಿಯರು ಓಜಸ್ಸಿನ ಬಲದಿಂದ ವಾಜಿಯೇ / ಅಶ್ವವೇ ಮೊದಲಾದವುಗಳ ಸಹಿತ ಯುದ್ಧವಿದ್ಯೆಗಳನ್ನು ನಿತ್ಯಾಭ್ಯಾಸ ಮಾಡಬೇಕು.


ಹಾಗೆಯೇ,


“ಜಗತೀಂ ವೈಶ್ಯಮನುಬ್ರೂಯಾತ್ | ಜಾಗತೋ ವೈ ವೈಶ್ಯಃ | ಜಾಗತಾಃ ಪಶವಃ | ಪಶುಭಿರೇವೈನಂ ತತ್ಸಮರ್ದ್ಧಯತಿ ||” (ಐ.ಬ್ರಾ.೫.೨)


ವೈಶ್ಯನಿಗೆ (೧೨ ಅಕ್ಷರಗಳ ೪ ಪಾದಗಳ ಒಟ್ಟು ೪೮ ಅಕ್ಷರಗಳುಳ್ಳ) ಜಗತೀಛಂದಸ್ಸಿನ ಮಂತ್ರೋಪದೇಶವನ್ನು ಉಪನಯನಕಾಲದಲ್ಲಿ ಮಾಡತಕ್ಕದ್ದು. ಯಾಕೆಂದರೆ (ಪ್ರಜಾಪತಿಯ ತೊಡೆ ಎಂಬ ಸಮಾನ ಉತ್ಪತ್ತಿಸ್ಥಾನದಿಂದಲೂ) ವೈಶ್ಯನು ಜಗತೀಸಂಬಂಧಿಯು / ಜಾಗತನು. ಜಾಗತರೆಂದರೆ ಜಗತ್ತಿನಲ್ಲಿರುವ ಜೀವರೆಲ್ಲ ಪಶುಗಳು, ಮಾಯಾ-ಅವಿದ್ಯಾ-ಕಾಮ-ಕರ್ಮಗಳೆಂಬ ಪಾಶಗಳಿಂದ ಬದ್ಧರಾದ್ದರಿಂದ ಪಶುಗಳು. ಆ ಜಗತೀಮಂತ್ರಾನುಷ್ಠಾನವು, ವೈಶ್ಯರಿಗೆ ವಿಹಿತವಾದ (“ಕೃಷಿ-ಗೋರಕ್ಷ-ವಾಣಿಜ್ಯಂ ವೈಶ್ಯಕರ್ಮಸ್ವಭಾವಜಮ್”— ಕೃಷಿ, ಪಶುಸಂಗೋಪನೆ, ವ್ಯಾಪಾರಗಳು ವೈಶ್ಯನ ಸ್ವಭಾವಕ್ಕೆ ವಿಹಿತವಾದ ಕರ್ಮಗಳು— ಭಗವದ್ಗೀತಾ) ಪಶುಪಾಲನಾದಿಕರ್ಮಗಳಿಂದ ವೈಶ್ಯನ ಅಭಿವೃದ್ಧಿಯನ್ನು ಮಾಡುತ್ತದೆ.


ಯದೋಷಧಯಃ ಸಂಗಚ್ಛಂತೇ ರಾಜಾನಸ್ಸಮಿತಾವಿವ |

ವಿಪ್ರಃ ಸ ಉಚ್ಯತೇ ಭಿಷಗ್ರಕ್ಷೋಹಾऽಮೀವಚಾತನಃ ||

(ತೈ.ಕೃ.ಯಜು.೪.೨.೬)


(ಯತ್) ಯಾವಾಗ, (ಓಷಧಯಃ) ಓಷಧಿಗಳು, (ರಾಜಾನಃ) ಅರಸರು, (ಸಮಿತೌ ಇವ) ಯುದ್ಧದಲ್ಲಿ (ಶತ್ರುಗಳನ್ನು ಗೆಲ್ಲಲು) (ಒಟ್ಟುಗೂಡುವಂತೆ), (ಸಂಗಚ್ಛಂತೇ) (ಹಸಿವನ್ನೂ, ರಕ್ಷೋಬಾಧೆಯನ್ನೂ, ರೋಗಬಾಧೆಯನ್ನೂ) ಹೋಗಲಾಡಿಸಲು ಸೇರುತ್ತವೆಯೋ ಆಗ, (ವಿಪ್ರಃ ಸಃ) ರಸಭಾವಸಾಮರ್ಥ್ಯವನ್ನು ತಿಳಿದಿರುವ ಮೇಧಾವಿಯಾದವನು, (ರಕ್ಷೋಹಾ) (ಪುರೋಡಾಶಯಾಗಾದಿಗಳಿಂದ) ರಾಕ್ಷಸಪೀಡೆಯನ್ನು ಪರಿಹರಿಸುವ, (ಅಮೀವಚಾತನಃ) ರೋಗಗಳನ್ನು ಪಥ್ಯಾದಿಗಳಿಂದ ಪರಿಹರಿಸುವ, (ಭಿಷಕ್) ಸಮರ್ಥನಾದ ವೈದ್ಯನೆಂದು, (ಉಚ್ಯತೇ) ಹೇಳಲ್ಪಡುತ್ತಾನೆ.


ರಾಜರು ಶತ್ರುಜಯಕ್ಕಾಗಿ ಒಗ್ಗೂಡುವಂತೆ ಓಷಧಿಗಳು ರೋಗಾದಿಪರಿಹಾರಕ್ಕಾಗಿ ಸೇರುತ್ತವೆ. ಪುರೋಡಾಶಾದಿಯಾಗಗಳಿಂದ ರಕ್ಷೋಗಣಗಳ ಬಾಧೆಯು ದೂರವಾಗುತ್ತದೆ. ಪಥ್ಯಾದಿಗಳಿಂದ ರೋಗಪರಿಹಾರವಾಗುತ್ತದೆ. ಓಷಧಿಗಳ ಇಂತಹ ರಸಭಾವಸಾಮರ್ಥ್ಯವನ್ನರಿತವನೇ ನಿಜವಾದ, ಶ್ರೇಷ್ಠವಾದ ವೈದ್ಯನೆನಿಸುತ್ತಾನೆ. ಯಾವ ಓಷಧಿಗಳನ್ನು ಯಾವ ಪ್ರಮಾಣದಲ್ಲಿ ಯಾವ ವಿಧಿ ವಿಧಾನಗಳಿಂದ ಹೇಗೆ ಸೇರಿಸಿದರೆ ಅವು ಸಮತೋಲನ ಆಹಾರವಾಗಿ ಆರೋಗ್ಯಕರವೂ ಪುಷ್ಟಿಪ್ರದವೂ ಆಗಿ ಹಸಿವನ್ನೂ ಇಂಗಿಸುವುದೋ, ಯಾವ ಓಷಧಿಸಮಿತ್ತುಗಳಿಂದ ಪುರೋಡಾಶವೇ ಮೊದಲಾದ ಯಾಗಮುಖೇನ ದುಷ್ಟಬಾಧೆ ನಿವಾರಣೆಯಾಗುವುದೋ, ಯಾವ ಸಂಮಿಶ್ರಣದಿಂದ ಪಥ್ಯಾದಿದ್ವಾರಾ ರೋಗ ಪರಿಹಾರವಾಗುವುದೋ, ಇವನ್ನೆಲ್ಲ ಅರಿತ ವಿಪ್ರ / ಬ್ರಾಹ್ಮಣ / ಜ್ಞಾನಿ / ಮೇಧಾವಿಯು ಉತ್ತಮ ವೈದ್ಯನಾಗುತ್ತಾನೆ.


ಓಷಧಯಃ ಸಂ ವದಂತೇ ಸೋಮೇನ ಸಹ ರಾಜ್ಞಾ |

ಯಸ್ಮೈ ಕರೋತಿ ಬ್ರಾಹ್ಮಣಸ್ತಗ್ಂ ರಾಜನ್ಪಾರಯಾಮಸಿ ||

(ತೈ.ಕೃ.ಯಜು.೪.೨.೬)


(ರಾಜನ್) ಸೋಮರಾಜನೇ! (ಯಸ್ಮೈ) ಯಾವಾತನ ಚಿಕಿತ್ಸೆಗಾಗಿ, (ಬ್ರಾಹ್ಮಣಃ) ಬ್ರಾಹ್ಮಣನಾದ ಋತ್ವಿಜನು, (ಕರೋತಿ) ಚಿಕಿತ್ಸೆಯನ್ನು ಮಾಡುತ್ತಾನೋ, (ತಮ್, ಪಾರಯಾಮಸಿ) ಆತನನ್ನು (ರೋಗದಿಂದ) ಬಿಡಿಸೋಣ (ಎಂದು), (ಓಷಧಯಃ) ಓಷಧಿಗಳು, (ಸೋಮೇನ ರಾಜ್ಞಾ ಸಹ) ಓಷಧಿರಾಜನಾದ ಸೋಮನೊಡನೆ, (ಸಂವದಂತೇ) ಸಂವಾದ ಮಾಡುತ್ತವೆ.


ಓಷಧಿಗಳು ತಮ್ಮ ರಾಜನಾದ ಸೋಮನೊಡನೆ—ಯಾರಿಗಾಗಿ ಬ್ರಾಹ್ಮಣನು ಚಿಕಿತ್ಸೆಯನ್ನು ಮಾಡುತ್ತಿರುವನೋ ಅವನನ್ನು ರೋಗಮುಕ್ತನನ್ನಾಗಿ ಮಾಡೋಣ ಎಂದು— ಸಂಭಾಷಿಸುತ್ತವೆ.


ಗಾಯತ್ರೀಭಿರ್ಬ್ರಾಹ್ಮಣಸ್ಯ ಗಾಯತ್ರೋ ಹಿ ಬ್ರಾಹ್ಮಣಸ್ತ್ರಿಷ್ಟುಗ್ಭೀ ರಾಜನ್ಯಸ್ಯ ತ್ರೈಷ್ಟುಭೋ ಹಿ ರಾಜನ್ಯಃ…

(ತೈ.ಕೃ.ಯಜು.೫.೧.೪)


ಯಜಮಾನನು ಬ್ರಾಹ್ಮಣನಾದರೆ ಗಾಯತ್ರೀಛಂದಸ್ಸಿನ ಮಂತ್ರಗಳಿಂದ ಮೃತ್ತಿಕೆಯನ್ನು ಸಂಗ್ರಹಿಸಬೇಕು. ಪ್ರಜಾಪತಿದೇವನ ಮುಖದಿಂದ ಗಾಯತ್ರಿಯೂ, ಬ್ರಾಹ್ಮಣನೂ ಜನಿಸಿರುವುದರಿಂದ ಬ್ರಾಹ್ಮಣನು ಗಾಯತ್ರೀಸಂಬಂಧಿಯಷ್ಟೆ? ಯಜಮಾನನು ಕ್ಷತ್ರಿಯನಾದರೆ ತ್ರಿಷ್ಟುಪ್ ಛಂದಸ್ಸಿನ ಮಂತ್ರಗಳಿಂದ ಮೃತ್ತನ್ನು (ಮಣ್ಣನ್ನು) ಸಂಗ್ರಹಿಸಬೇಕು. ರಾಜನ್ಯರೂ (ಕ್ಷತ್ರಿಯರೂ) ತ್ರಿಷ್ಟುಪ್ ಛಂದಸ್ಸೂ ಪ್ರಜಾಪತಿದೇವನ ಬಾಹುಗಳಿಂದಲೇ / ಸಮಾನಸ್ಥಾನದಲ್ಲೇ ಹುಟ್ಟಿರುವುದರಿಂದ ರಾಜನ್ಯರೂ ತ್ರಿಷ್ಟುಪ್ ಸಂಬಂಧಿಯಾಗಿರುತ್ತಾರೆಯಲ್ಲವೆ?


(ಬ್ರಾಹ್ಮಣರಿಗೂ ಗಾಯತ್ರಿಗೂ ಇರುವ, ಹಾಗೆಯೇ ಕ್ಷತ್ರಿಯರಿಗೂ ತ್ರಿಷ್ಟುಪ್ಪಿಗೂ ಇರುವ ಸಂಬಂಧದ ಬಗ್ಗೆ ತೈ.ಕೃ.ಯಜುರ್ವೇದದಲ್ಲಿ ಹಲವು ಕಡೆ ಬಂದಿದೆ). 


ಬ್ರಾಹ್ಮಣ-ಕ್ಷತ್ರಿಯ ಪರಸ್ಪರ ಉಪಕಾರ—


ಸಗ್ಂಶಿತಂ ಮೇ ಬ್ರಹ್ಮೋದೇಷಾಂ ಬಾಹೂ ಅತಿರಮಿತಿ…ಬ್ರಹ್ಮಣೈವ ಕ್ಷತ್ರಗ್ಂ ಸಗ್ಗ್ಂಶ್ಯತಿ ಕ್ಷತ್ರೇಣ ಬ್ರಹ್ಮ ತಸ್ಮಾದ್ಬ್ರಾಹ್ಮಣೋ ರಾಜನ್ಯವಾನತ್ಯನ್ಯಂ ಬ್ರಾಹ್ಮಣಂ ತಸ್ಮಾದ್ರಾಜನ್ಯೋ ಬ್ರಾಹ್ಮಣವಾನತ್ಯನ್ಯಗ್ಂ ರಾಜನ್ಯಂ…

(ತೈ.ಕೃ.ಯಜು.೫.೧.೧೦)


‘ನನ್ನ ಬ್ರಾಹ್ಮಣ್ಯವು ತೀಕ್ಷ್ಣವಾಗಲಿ / ಕಾರ್ಯಸಮರ್ಥವಾಗಲಿ.’ ‘ಈ ನಮ್ಮವರ ಕೈ ಮೇಲಾಗುವಂತೆ ಮಾಡಿದೆನು.’....ಇದು ಬ್ರಾಹ್ಮಣಬೆಂಬಲದಿಂದ ಕ್ಷತ್ರಿಯನು ತೀಕ್ಷ್ಣನಾಗುವಂತೆ / ಪ್ರಜಾಪಾಲನಕಾರ್ಯಸಮರ್ಥನಾಗುವಂತೆ ಮಾಡುತ್ತದೆ. ಕ್ಷತ್ರಿಯನಿಂದ ಬ್ರಾಹ್ಮಣನು ತನ್ನ ಧರ್ಮಕಾರ್ಯದಲ್ಲಿ ನಿರತನಾಗುವಂತೆ ಮಾಡುತ್ತದೆ. ಅದರಿಂದ ಬ್ರಾಹ್ಮಣನು, ಪಾಲಕನಾದ ರಾಜನಿಲ್ಲದ ಬೇರೆಯ ಬ್ರಾಹ್ಮಣನನ್ನು ಮೀರಿಸಿ, ಉತ್ತಮಪಾಲಕನಾದ ರಾಜನನ್ನು ಪಡೆದವನಾಗುತ್ತಾನೆ. ರಾಜನೂ, ಧರ್ಮಬೋಧಕನಾದ ಪುರೋಹಿತನಿಲ್ಲದ ಬೇರೆಯ ರಾಜನನ್ನು ಮೀರಿಸಿ, ಉತ್ತಮ ಧರ್ಮಬೋಧಕನಾದ ಪುರೋಹಿತನನ್ನು ಪಡೆದವನಾಗುತ್ತಾನೆ. ಬ್ರಹ್ಮ-ಕ್ಷತ್ರಗಳು ಪರಸ್ಪರೋಪಕಾರಕಗಳೆಂದರ್ಥ. ಇಬ್ಬರೂ ಉತ್ತಮರಾಗುತ್ತಾರೆ.


ಬ್ರಹ್ಮಮುಖಾ ವೈ ಪ್ರಜಾಪತಿಃ ಪ್ರಜಾ ಅಸೃಜತ…ತಸ್ಮಾದ್ಬ್ರಾಹ್ಮಣೋ ಮುಖ್ಯೋ ಮುಖ್ಯೋ ಭವತಿ ಯ ಏವಂ ವೇದ

(ತೈ.ಕೃ.ಯಜು.೫.೨.೭)


ಪ್ರಜಾಪತಿದೇವನು ಬ್ರಾಹ್ಮಣನೇ ಮುಖ್ಯನಾಗಿರುವ ಪ್ರಜೆಗಳನ್ನು ಸೃಷ್ಟಿಸಿದನು. ಬ್ರಾಹ್ಮಣನೇ ಮೊದಲು ಉತ್ಪತ್ತಿಯಾಗಿರುವುದರಿಂದ ಆತನೇ ಮುಖ್ಯನಾಗಿರುತ್ತಾನೆ. ಯಾರು ಈ ರೀತಿ ತಿಳಿಯುವನೋ ಅವನೂ ಮುಖ್ಯನಾಗುವನು.


ಏಷ ವಾ ಅಗ್ನಿರ್ವೈಶ್ವಾನರೋ ಯದ್ಬ್ರಾಹ್ಮಣಸ್ತಸ್ಮೈ ಪ್ರಥಮಾಮಿಷ್ಟಕಾಂ ಯಜುಷ್ಕೃತಾಂ ಪ್ರಯಚ್ಛೇತ್ತಾಂ ಬ್ರಾಹ್ಮಣಶ್ಚೋಪದಧ್ಯಾತಾಮಗ್ನಾವೇವ ತದಗ್ನಿಂ ಚಿನುತೇ…

(ತೈ.ಕೃ.ಯಜು.೫.೨.೮)


ಈ ಬ್ರಾಹ್ಮಣನೆಂಬುವನು ವೈಶ್ವಾನರಾಗ್ನಿರೂಪನು. ಅಧ್ವರ್ಯುವು ಆ ಬ್ರಾಹ್ಮಣನಿಗೆ ಮೊದಲ ಯಜುರ್ಮಂತ್ರಸಂಸ್ಕೃತವಾದ ಇಟ್ಟಿಗೆಯನ್ನು ಕೊಡಬೇಕು. ಬಳಿಕ ಅಧ್ವರ್ಯುವೂ ಆ ಬ್ರಾಹ್ಮಣನೂ ಕೂಡಿ ಆ ಇಷ್ಟಕೆಯನ್ನು ಉಪಧಾನ ಮಾಡಬೇಕು. ಆದುದರಿಂದ (ಬ್ರಾಹ್ಮಣನು ಅಗ್ನಿರೂಪನಾದುದರಿಂದ— ಅವನೂ ಉಪಧಾನ ಮಾಡುವುದರಿಂದ)ಅಗ್ನಿಯಲ್ಲಿಯೇ ಅಗ್ನಿಚಯನವನ್ನು ಮಾಡಿದಂತಾಗುತ್ತದೆ.


ಆಗ್ನೇಯೋ ವೈ ಬ್ರಾಹ್ಮಣಸ್ತಸ್ಮಾದ್ಬ್ರಾಹ್ಮಣಾಯ ಸರ್ವಾಸು ದಿಕ್ಷ್ವರ್ಧುಕಗ್ಗ್ಂ ಸ್ವಾಮೇವ ತದ್ದಿಶಮನ್ವೇತಿ…

(ತೈ.ಕೃ.ಯಜು.೫.೬.೪)


(ಆಗ್ನೇಯೋ ವೈ ಬ್ರಾಹ್ಮಣಃ) ಅಗ್ನಿಯೂ ಬ್ರಾಹ್ಮಣನೂ ಪ್ರಜಾಪತಿಯ ಮುಖದಿಂದ ಜನಿಸಿದವರು. ಆದುದರಿಂದ ಬ್ರಾಹ್ಮಣನು ಆಗ್ನೇಯನು / ಅಗ್ನಿಸಂಬಂಧಿಯು. (ತಸ್ಮಿನ್ನಗ್ನಿಮಚಿನುತ ತದಿಯಮಭವತ್—ತೈ.ಕೃ.ಯಜು.೫.೬.೪— ಪ್ರಜಾಪತಿಯು ಸೃಷ್ಟಿಯ ಮೊದಲು ತೋರುವ ಜಗವೆಲ್ಲ ನೀರೇ ಆಗಿದ್ದಾಗ ಅದರ ನಡುವಿದ್ದ ಪಾಚಿಯಲ್ಲಿ ಅಗ್ನಿಚಯನವನ್ನು ಅನುಷ್ಠಿಸಿದನು. ಆ ಚಿತ ಅಗ್ನಿಯೇ ಭೂಮಿಯಾಯಿತು. ಹೀಗಾಗಿ) ಎಲ್ಲ ದಿಕ್ಕುಗಳೂ ಭೂಮಿಯ ಅವಯವಗಳಾಗಿರುವುದರಿಂದ ಅಗ್ನಿಯ ಅಂಶಗಳೇ ಆಗಿವೆ. (ತಸ್ಮಾತ್ ಬ್ರಾಹ್ಮಣಾಯ ಸರ್ವಾಸು ದಿಕ್ಷು ಅರ್ಧುಕಮ್) ಹಾಗಾಗಿ, ಬ್ರಾಹ್ಮಣನು ಎಲ್ಲ ದಿಕ್ಕುಗಳಲ್ಲಿಯೂ ಸಮೃದ್ಧಿಶೀಲನಾಗುತ್ತಾನೆಂದು ಹೇಳಿದೆ. (ತತ್ / ತಸ್ಮಾತ್, ಸ್ವಾಮೇವ ದಿಶಮ್ ಅನು+ಏತಿ) ಆತನು ತನ್ನದೇ ಆದ ಸರ್ವದಿಕ್ಕುಗಳನ್ನೂ ಅನುಸರಿಸಿ ಸಂಚರಿಸುತ್ತಾನೆ, ಎಲ್ಲೆಡೆಯೂ ತನ್ನ ಜ್ಞಾನದಿಂದ ಪ್ರಕಾಶಿಸುತ್ತಾನೆ. ಶಾಸ್ತ್ರಜ್ಞನಾದ ಬ್ರಾಹ್ಮಣನು ಸರ್ವದೇಶಗಳಲ್ಲಿಯೂ ಪ್ರಸಿದ್ಧನಾಗಿರುವನಷ್ಟೆ? 


“ವಿದ್ವತ್ವಂ ಚ ನೃಪತ್ವಂ ಚ ನೈವ ತುಲ್ಯೇ ಕದಾಚನ |

ಸ್ವದೇಶೇ ಪೂಜ್ಯತೇ ರಾಜಾ ವಿದ್ವಾನ್ ಸರ್ವತ್ರ ಪೂಜ್ಯತೇ || ”

(ಸುಭಾಷಿತ)

ವಿದ್ವತ್ವ / ಜ್ಞಾನ ಹಾಗೂ ನೃಪತ್ವ / ಅಧಿಕಾರ, ಒಡೆತನ— ಇವೆರಡು ಎಂದಿಗೂ ಸರಿಸಮವಲ್ಲ. ಯಾಕೆಂದರೆ, ರಾಜನಿಗೆ ತನ್ನ ದೇಶದಲ್ಲಿ ಮಾತ್ರ ಬೆಲೆ; ಆದರೆ ಜ್ಞಾನಿ / ವಿದ್ವಾಂಸನಿಗೆ ಎಲ್ಲೆಡೆಯಲ್ಲೂ ಗೌರವವಿದೆ.


ಯದಾಜ್ಯಮುಚ್ಛಿಷ್ಯೇತ ತಸ್ಮಿನ್ ಬ್ರಹ್ಮೌದನಂ ಪಚೇತ್ ತಂ ಬ್ರಾಹ್ಮಣಾಶ್ಚತ್ವಾರಃ ಪ್ರಾಶ್ಞೀಯುಃ | ಏಷ ವಾ ಅಗ್ನಿರ್ವೈಶ್ವಾನರೋ ಯದ್ಬ್ರಾಹ್ಮಣ ಏಷಾ ಖಲು ವಾ ಅಗ್ನೇಃ ಪ್ರಿಯಾ ತನೂರ್ಯದ್ವೈಶ್ವಾನರಃ ಪ್ರಿಯಾಯಾಮೇವೈನಾಂ ತನುವಾಂ ಪ್ರತಿಷ್ಠಾಪಯತಿ…

(ತೈ.ಕೃ.ಯಜು.೫.೭.೩)


ವಸೋರ್ಧಾರಾಹೋಮದ ಹುತಶೇಷವಾಗಿ ಯಾವ ಆಜ್ಯವಿರುವುದೋ ಅದರಲ್ಲಿ ಬ್ರಾಹ್ಮಣರ ಭೋಜನಕ್ಕಾಗಿ ಬ್ರಹ್ಮೌದನಪಾಕವನ್ನು ಮಾಡಬೇಕು. ಆ ಬ್ರಹ್ಮೌದನ (ಬ್ರಹ್ಮ+ಓದನ= ಬ್ರಾಹ್ಮಣರಿಗೆ ಅನ್ನ) ವನ್ನು ನಾಲ್ವರು ಬ್ರಾಹ್ಮಣರು ಭೋಜನ ಮಾಡಬೇಕು. ಬ್ರಾಹ್ಮಣನು (ಸರ್ವಜನಪ್ರಿಯನಾಗಿ) ವೈಶ್ವಾನರಾಗ್ನಿಸ್ವರೂಪನಾಗಿರುವನಷ್ಟೆ? ಈ ವೈಶ್ವಾನರಸ್ವರೂಪವು ಅಗ್ನಿಗೆ ಪ್ರಿಯವಾದ ಶರೀರವಾಗಿದೆಯಷ್ಟೆ? ಅಗ್ನಿಗೆ ಪ್ರಿಯವಾದ ಶರೀರದಲ್ಲಿಯೇ ಆಹುತಿಯನ್ನು ಸ್ಥಾಪಿಸಿದವನಾಗುತ್ತಾನೆ. 


ಅದೀಕ್ಷಿಷ್ಟ ಅಯಂ ಬ್ರಾಹ್ಮಣಃ…

(ತೈ.ಕೃ.ಯಜು.೬.೧.೪)


ಈ ಬ್ರಾಹ್ಮಣನು ದೀಕ್ಷಾಸಂಸ್ಕಾರದಿಂದ ಸಂಸ್ಕರಿಸಲ್ಪಟ್ಟಿರುವನು.


ಪಯೋ ಬ್ರಾಹ್ಮಣಸ್ಯ ತೇಜೋ ವೈ ಬ್ರಾಹ್ಮಣಃ…

(ತೈ.ಕೃ.ಯಜು.೬.೨.೫)


ಬ್ರಾಹ್ಮಣನಾದವನಿಗೆ ಹಾಲು ವ್ರತಸಾಧನವಾಗಿದೆ / ಆಗಬೇಕು. ಬ್ರಾಹ್ಮಣನು (ಅಧ್ಯಾಪನಾದಿರೂಪತೇಜಸ್ಸಿನಿಂದ) ತೇಜಸ್ವಿಯಾಗಿದ್ದಾನೆ.


ತಸ್ಮಾದ್ದ್ವಿನಾಮಾ ಬ್ರಾಹ್ಮಣೋऽರ್ಧುಕಃ…

(ತೈ.ಕೃ.ಯಜು.೬.೩.೧)


ಆದ್ದರಿಂದ ಎರಡು ಹೆಸರುಗಳುಳ್ಳ (ಅಂಕಿತನಾಮವುಳ್ಳವನು ಆಚಾರ್ಯ, ಉಪಾಧ್ಯಾಯ, ಶಾಸ್ತ್ರೀ, ಭಟ್ಟ, ಜೋಶಿ…ಇತ್ಯಾದಿ ಉಪನಾಮದೊಂದಿಗೆ) ಬ್ರಾಹ್ಮಣನು ಸಮೃದ್ಧಿಯನ್ನು ಹೊಂದಿರುತ್ತಾನೆ.


ಸೋಮಪಾನವನ್ನು ಹೊಂದದಿರುವ ಧಿಷ್ಣಿಯದೇವತೆಗಳು, ಎರಡು ಹೆಸರಿಟ್ಟುಕೊಂಡರೆ ಒಂದು ಹೆಸರಿಗೆ ಯೋಗ್ಯತೆಯುಂಟಾಗಿ ಪಾಕ್ಷಿಕಯೋಗ್ಯತೆಯಾಗುವುದೆಂಬ ದೇವತೆಗಳ ಸೂಚನೆಯಂತೆ ಅಗ್ನಿಗಳೆಂಬ ಎರಡನೆಯ ಹೆಸರಿಟ್ಟುಕೊಂಡವು. ಆ ಕಾರಣದಿಂದಲೇ ಲೋಕದಲ್ಲೂ ಸಹ ‘ದೇವದತ್ತ’ ಮುಂತಾದ ಮೊದಲ ಹೆಸರಿರುವವನು ‘ಆಚಾರ್ಯ’, ‘ಉಪಾಧ್ಯಾಯ’, ‘ಶಾಸ್ತ್ರೀ’, ‘ಶರ್ಮಾ’ ಮುಂತಾದ ಎರಡನೆಯ ಹೆಸರನ್ನು ಪಡೆದು ಸಮೃದ್ಧಿಯನ್ನು ಹೊಂದುವನು.


ಜಾಯಮಾನೋ ವೈ ಬ್ರಾಹ್ಮಣಸ್ತ್ರಿಭಿರ್ ಋಣವಾ ಜಾಯತೇ ಬ್ರಹ್ಮಚರ್ಯೇಣರ್ಷಿಭ್ಯೋ ಯಜ್ಞೇನ ದೇವೇಭ್ಯಃ ಪ್ರಜಯಾ ಪಿತೃಭ್ಯ ಏಷ ವಾ ಅನೃಣೋ ಯಃ ಪುತ್ರೀ ಯಜ್ವಾ ಬ್ರಹ್ಮಚಾರಿವಾಸೀ…

(ತೈ.ಕೃ.ಯಜು.೬.೩.೧೦)


ಬ್ರಾಹ್ಮಣನು ಹುಟ್ಟುತ್ತಲೇ (ಋಷಿಋಣ, ದೇವಋಣ, ಪಿತೃಋಣಗಳೆಂಬ) ಋಣತ್ರಯದೊಂದಿಗೇ ಜನಿಸುತ್ತಾನೆ. ಋಷಿಗಳಿಗೆ ಬ್ರಹ್ಮಚಾರಿವ್ರತದಿಂದಲೂ, ದೇವತೆಗಳಿಗೆ ಯಜ್ಞಾನುಷ್ಠಾನದಿಂದಲೂ, ಪಿತೃಗಳಿಗೆ ಸಂತತಿಯಿಂದಲೂ (ಬ್ರಾಹ್ಮಣನು ಸಾಲಗಾರನಾಗಿ ಜನಿಸುತ್ತಾನೆ. ಹಣದಿಂದ ಸಾಲಗಾರನಾಗಿ ಅಲ್ಲ.) ಯಾವ ಬ್ರಾಹ್ಮಣನು ಉತ್ತಮ ಪುತ್ರ / ಪುತ್ರಿಯರನ್ನು ಹೊಂದಿರುವನೋ, ಯಜ್ಞಾನುಷ್ಠಾನಿಯೋ, ವೇದಾಭ್ಯಾಸಕ್ಕಾಗಿ ಗುರುಕುಲವಾಸಿಯಾಗುತ್ತಾನೋ ಇಂಥವನು ಋಣಗಳನ್ನು ತೀರಿಸಿ ಋಣಮುಕ್ತನಾಗುತ್ತಾನೆ. ಹಾಗಾಗಿ ಬ್ರಾಹ್ಮಣಜಾತನಿಗೆ ಇವು ಮೂರೂ ವೇದಶಾಸ್ತ್ರವಿಹಿತ ಅನುಷ್ಠೇಯ ಕರ್ತವ್ಯಗಳಾಗಿವೆ.


ಏಷ ವೈ ಬ್ರಾಹ್ಮಣ ಋಷಿರಾರ್ಷೇಯೋ ಯಶ್ಶುಶ್ರುವಾನ್…

(ತೈ.ಕೃ.ಯಜು.೬.೬.೧)


ಯಾವನು ವೇದಶಾಸ್ತ್ರಪಾರಂಗತನೋ ಅವನೇ ಈ ಆರ್ಷೇಯ ಮುಂತಾದ ಶಬ್ದಗಳಿಗೆ ಅರ್ಹನಾದ ಬ್ರಾಹ್ಮಣನು.


ಪ್ರಜಾಪತಿರಕಾಮಯತ ಪ್ರ ಜಾಯೇಯೇತಿ ಸ ಮುಖತಸ್ತ್ರಿವೃತಂ ನಿರಮಿಮೀತ ತಮಗ್ನಿರ್ದೇವತಾऽನ್ವಸೃಜ್ಯತ ಗಾಯತ್ರೀ ಛನ್ದೋ ರಥನ್ತರಗ್ಂ ಸಾಮ ಬ್ರಾಹ್ಮಣೋ ಮನುಷ್ಯಾಣಾಮಜಃ ಪಶೂನಾಂ ತಸ್ಮಾತ್ ತೇ ಮುಖ್ಯಾ ಮುಖತೋ ಹ್ಯಸೃಜ್ಯನ್ತ…

(ತೈ.ಕೃ.ಯಜು.೭.೧.೧)


ಸೃಷ್ಟಿಕಾಮನಾದ ಪ್ರಜಾಪತಿಯು ಅದಕ್ಕೆ ಸಾಧನವಾಗಿ ಅಗ್ನಿಷ್ಟೋಮವನ್ನು ಅನುಷ್ಠಿಸಿ (ದೇವತಾಜ್ಯೇಷ್ಠನಾದ ಪ್ರಜಾಪತಿಯು ಮೊತ್ತಮೊದಲು ಅನುಷ್ಠಿಸಿದ್ದರಿಂದ ಅಗ್ನಿಷ್ಟೋಮವು ಜ್ಯೇಷ್ಠಯಜ್ಞವೆನಿಸಿತು) ಅದರ ಸಾಮರ್ಥ್ಯದಿಂದ ಸತ್ಯಸಂಕಲ್ಪನಾಗಿ ತನ್ನ ಮುಖದಿಂದ ಸಂಕಲ್ಪಮಾತ್ರದಿಂದಲೇ ಮೊದಲು ತ್ರಿವೃತ್ ಸ್ತೋಮವನ್ನು ಸೃಜಿಸಿದನು. ಅದನ್ನನುಸರಿಸಿ ದೇವತೆಗಳಲ್ಲಿ ಅಗ್ನಿಯನ್ನೂ, ಬಳಿಕ ಛಂದಸ್ಸುಗಳಲ್ಲಿ ಗಾಯತ್ರಿಯನ್ನೂ, ತರುವಾಯ ಸಾಮಗಳ ನಡುವೆ ರಥಂತರಸಾಮವನ್ನೂ, ತದನಂತರ ಮನುಷ್ಯರಲ್ಲಿ ಬ್ರಾಹ್ಮಣನನ್ನೂ, ಪಶುಗಳಲ್ಲಿ ಆಡನ್ನೂ ಸೃಜಿಸಿದನು. ಇವರೆಲ್ಲರೂ ಪ್ರಜಾಪತಿಯ ಮುಖದಿಂದ ಸೃಷ್ಟರಾದ್ದರಿಂದ ಮುಖ್ಯರೂ, ಮುಂದೆ ಸೃಷ್ಟಿಯಾಗಲಿರುವ ಎಲ್ಲಕ್ಕಿಂತಲೂ ಶ್ರೇಷ್ಠರೂ ಜ್ಯೇಷ್ಠರೂ ಎನಿಸಿದರು.


ಆ ಬ್ರಹ್ಮನ್ ಬ್ರಾಹ್ಮಣೋ ಬ್ರಹ್ಮವರ್ಚಸೀ ಜಾಯತಾಮಾऽಸ್ಮಿನ್ ರಾಷ್ಟ್ರೇ ರಾಜನ್ಯ ಇಷವ್ಯಃ ಶೂರೋ ಮಹಾರಥೋ ಜಾಯತಾಂ ದೋಗ್ಧ್ರೀ ಧೇನುರ್ವೋಢಾऽನಡ್ವಾನಾಶುಃ ಸಪ್ತಿಃ ಪುರನ್ಧಿರ್ಯೋಷಾ ಜಿಷ್ಣೂ ರಥೇಷ್ಠಾಃ ಸಭೇಯೋ ಯುವಾऽಸ್ಯ ಯಜಮಾನಸ್ಯ ವೀರೋ ಜಾಯತಾಂ ನಿಕಾಮೇನಿಕಾಮೇ ನಃ ಪರ್ಜನ್ಯೋ ವರ್ಷತು ಫಲಿನ್ಯೋ ನ ಓಷಧಯಃ ಪಚ್ಯನ್ತಾಂ ಯೋಗಕ್ಷೇಮೋ ನಃ ಕಲ್ಪತಾಮ್ ||

(ತೈ.ಕೃ.ಯಜು.೭.೫.೧೮)


(ಬ್ರಹ್ಮನ್) ಬ್ರಹ್ಮನಲ್ಲಿ / ಬ್ರಾಹ್ಮಣಜಾತಿಯಲ್ಲಿ, (ಬ್ರಹ್ಮವರ್ಚಸೀ) ವೇದಾಧ್ಯಯನಸಂಪನ್ನನಾದ, (ಬ್ರಾಹ್ಮಣಃ) ಬ್ರಾಹ್ಮಣನು, (ಆ-ಜಾಯತಾಮ್) ಎಲ್ಲೆಡೆಯಲ್ಲೂ ಉಂಟಾಗಲಿ. (ಅಸ್ಮಿನ್ ರಾಷ್ಟ್ರೇ) ಈ ರಾಷ್ಟ್ರದಲ್ಲಿ, (ಇಷವ್ಯಃ) ಬಾಣಾದಿ ಆಯುಧಗಳಲ್ಲಿ ಕುಶಲನಾದ, (ಶೂರಃ) ಮಹಾವೀರನಾದ, (ಮಹಾರಥಃ) ರಥಚರ್ಯೆಯಲ್ಲಿ ಶ್ರೇಷ್ಠನಾದ, (ರಾಜನ್ಯಃ) ಕ್ಷತ್ರಿಯರಾಜನು, (ಆ-ಜಾಯತಾಮ್) ಉಂಟಾಗಲಿ. (ದೋಗ್ಧ್ರೀ ಧೇನುಃ) ಈ ಯಜಮಾನನಿಗೆ ಸುಲಭವಾಗಿ ಹೆಚ್ಚು ಹಾಲು ಕೊಡಬಲ್ಲ ಗೋವುಗಳೇ ದೊರಕಲಿ. (ಅನಡ್ವಾನ್) ಎತ್ತುಗಳು, (ವೋಢಾ) ಉತ್ತಮ ಭಾರವಾಹಿಗಳಾಗಲಿ. (ಆಶುಃ) ಬೇಗನೆ ವೇಗವಾಗಿ ಸಂಚರಿಸಬಲ್ಲ ಶೀಘ್ರಗತಿಯುಳ್ಳ, (ಸಪ್ತಿಃ) ಅಶ್ವಗಳು ಹುಟ್ಟಲಿ. (ಪುರನ್ಧಿಃ) ರೂಪವತಿಯರಾದ, ಪುರುಷರು ಸದಾ ಚಿಂತಿಸುವಷ್ಟು ಸುಂದರಿಯರಾದ (“ಪುರಂ ಶರೀರಂ ಧೀಯತೇ ಅಸ್ಯಾಮ್ ”— ಪುರುಷನು ಈಕೆಯಲ್ಲೇ ತನ್ನ ಶರೀರವನ್ನು ಮುಡಿಪಾಗಿಡಬಲ್ಲಂತಹ ಸುಂದರಿ, “ಪುರುಭಿರ್ವಾ ಧ್ಯಾತವ್ಯಾ”— ಅಥವಾ, ಎಲ್ಲರಿಂದ ಮನಸ್ಸಿನಲ್ಲಿ ಚಿಂತಿಸಲ್ಪಡಬಲ್ಲ ರೂಪವತೀ), (ಯೋಷಾ) ಸ್ತ್ರೀಯರೂ ಹುಟ್ಟಲಿ. (ಜಿಷ್ಣುಃ) ಜಯಶೀಲರಾದ, (ರಥೇಷ್ಠಾಃ) ರಥದಲ್ಲಿ ಸ್ಥಿರವಾಗಿದ್ದು ಹೋರಾಡಬಲ್ಲ, (ಸಭೇಯಃ) ಸಭೆಗಳಲ್ಲಿ ಎದ್ದುಕಾಣಬಲ್ಲ ಲಕ್ಷಣಸಂಪನ್ನರಾದ, (ಯುವಾ ವೀರಃ) ತರುಣವೀರರು, (ಅಸ್ಯ ಯಜಮಾನಸ್ಯ) ಈ ಯಜ್ಞಕರ್ತೃವಿಗೆ, (ಆ-ಜಾಯತಾಮ್) ಹುಟ್ಟಲಿ. (ನಿಕಾಮೇನಿಕಾಮೇ) ಬಯಸಿದಾಗ ಬಯಸಿದಾಗ, (ನಃ) ನಮಗೆ, (ಪರ್ಜನ್ಯೋ ವರ್ಷತು) ಮಳೆ ಸುರಿಯಲಿ. (ನಃ) ನಮಗೆ, (ಫಲಿನ್ಯೋ ಓಷಧಯಃ ಪಚ್ಯನ್ತಾಮ್) ಅಧಿಕ ಪಲವನ್ನೀಯಬಲ್ಲ ಗಿಡಮರಗಳು ನಮ್ಮ ದೇಶದಲ್ಲಿ ಹುಟ್ಟಲಿ. (ನಃ) ನಮಗೆ, (ಯೋಗಕ್ಷೇಮಃ ಕಲ್ಪತಾಮ್) ಇಲ್ಲದ್ದು ಪ್ರಾಪ್ತವಾಗಲಿ, ದೊರೆತುದು ಸುರಕ್ಷಿತವಾಗಲಿ. (ಅಲಬ್ಧಸ್ಯ ಲಾಭೋ ಯೋಗಃ, ಲಬ್ಧಸ್ಯ ಪರಿಪಾಲನಂ ಕ್ಷೇಮಃ). 

Comments

Popular posts from this blog

ಸಂಸ್ಕೃತಶಬ್ದವ್ಯುತ್ಪತ್ತಿ-ಪರ್ಯಾಯಪದ-ಕೋಶಃ (ಸಂಸ್ಕೃತ-ಸಂಸ್ಕೃತ-ಕನ್ನಡ)

ಬ್ರಾಹ್ಮಣ್ಯ ೫

ಶ್ರೀನಾರಾಯಣಶತಕಮ್