ಅಗ್ನಿಃ ಕ್ರವ್ಯಾದ್ ಭೂತ್ವಾ ಬ್ರಹ್ಮಗವೀ ಬ್ರಹ್ಮಜ್ಯಂ ಪ್ರವಿಶ್ಯಾತ್ತಿ | (ಅಥರ್ವವೇದ ೧೨.೫.೪೧) (ಬ್ರಹ್ಮಗವೀ) ಬ್ರಹ್ಮಜ್ಞಾನವು / ಬ್ರಾಹ್ಮಣನ ಗೋವು, (ಕ್ರವ್ಯಾದ್ ಅಗ್ನಿಃ ಭೂತ್ವಾ) ಮಾಂಸಭಕ್ಷಕ ಅಗ್ನಿಯಾಗಿ, (ಬ್ರಹ್ಮಜ್ಯಂ) ಬ್ರಹ್ಮಜ್ಞವರಿಷ್ಠನನ್ನು, (ಪ್ರವಿಶ್ಯ) ಪ್ರವೇಶಿಸಿ, (ಅತ್ತಿ) ಆತನ ಪೂರ್ವಕರ್ಮಗಳನ್ನೆಲ್ಲ ತಿಂದುಹಾಕಿಬಿಡುತ್ತದೆ, ಸುಟ್ಟು ಭಸ್ಮಮಾಡುವುದು. “ಬ್ರಹ್ಮವಿದ್ ಬ್ರಾಹ್ಮಣಃ ಸ್ಮೃತಃ” ಎಂಬಂತೆ, ಬ್ರಹ್ಮವಿದನಾಗಿ ಬ್ರಾಹ್ಮಣನೆನಿಸಿದವನನ್ನು, ಆತನ ಜ್ಞಾನಾಗ್ನಿಯು ಪ್ರವೇಶಿಸಿ, ಆತ ಹಿಂದೆ ಮಾಡಿದ ಪುಣ್ಯ-ಪಾಪಕರ್ಮಗಳೆಲ್ಲವನ್ನು ದಹಿಸಿ ಬೂದಿಮಾಡುವುದು. “ಜ್ಞಾನಾಗ್ನಿಃ ಸರ್ವಕರ್ಮಾಣಿ ಭಸ್ಮಸಾತ್ ಕುರುತೇ…” ಎಂಬ ಗೀತಾವಾಕ್ಯದಂತೆ, ಜ್ಞಾನವೆಂಬ ಅಸದೃಶವಾದ, ಹೋಲಿಕೆಯಿಲ್ಲದೆ ಅತುಲನೀಯವೂ ನಿರುಪಮವೂ ಆದ ಬೆಂಕಿಯು (“ನ ಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ”) ವ್ಯಕ್ತಿಯ ಸಂಚಿತಕರ್ಮಗಳನ್ನೆಲ್ಲ ಸುಟ್ಟು, ಆತನನ್ನು ಕರ್ಮಾತೀತ ಮಾಡುತ್ತದೆ. ಇದರಿಂದ ಆತನ ದೇಹ ಲೌಕಿಕರ ದೃಷ್ಟಿಯಿಂದ ಪ್ರಾರಬ್ಧವನ್ನು (ಈಗಾಗಲೇ ಫಲ ಕೊಡಲಾರಂಭಿಸಿದ ಕರ್ಮವನ್ನು) ಮಾತ್ರ ಪೂರ್ತಿ ಅನುಭವಿಸುವವರೆಗಿದ್ದು, ಬಳಿಕ ಪಂಚಭೂತಗಳಲ್ಲಿ ಲೀನವಾಗುತ್ತದೆ. ಆದರೆ, ಆತನಿಗೆ ಮರಣಾನಂತಪ ಗಮನಾಗಮನವಿರುವುದಿಲ್ಲ. ಆತನು ಬದುಕಿರುವಾಗಲೇ ಜೀವನ್ಮುಕ್ತನಾಗಿದ್ದು, ಮರಣೋತ್ತರದಲ್ಲೂ ವಿದೇಹಮುಕ್ತನೇ ಆಗುವನು. “ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರಯ್ಯ” ಅಲ...